ಕಾರ್ಕಳ : ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ 80 ವರ್ಷ ಪ್ರಾಯದ ಮಹಿಳಾ ರೋಗಿಯೊಬ್ಬರಿಗೆ ಬಲ ಕಣ್ಣಿನ ಕ್ಯಾನ್ಸರ್ (ಮೆಲನೋಮಾ) ಕಾರಣದಿಂದ ಸಾಮಾನ್ಯ ಅರಿವಳಿಕೆಯಡಿ ಬಲ ಕಣ್ಣಿನ ಇನ್ಯೂಕ್ಲಿಯೇಷನ್ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ರೋಗಿ ಕಳೆದ ಕೆಲ ಸಮಯಗಳಿಂದ ಬಲ ಕಣ್ಣಿನಲ್ಲಿ ತೀವ್ರ ನೋವು ಹಾಗೂ ದೃಷ್ಟಿ ತೀವ್ರವಾಗಿ ಕುಂದಿರುವ ಸಮಸ್ಯೆಯಿಂದ ಬಳಲುತ್ತಿದ್ದರು.
ವಯೋಸಹಜ ಕಾರಣಗಳ ಜೊತೆಗೆ ಅಧಿಕ ರಕ್ತದೊತ್ತಡ, ಬೆನ್ನುಮೂಳೆಯ ವಕ್ರತೆ (ಕೈಫೋಸ್ಕೋಲಿಯೋಸಿಸ್), ಉಸಿರಾಟಕ್ಕೆ ಸಂಬಂಧಿಸಿ ಹೃದಯದ ಮೇಲಿನ ಒತ್ತಡ ಹಾಗೂ ದೇಹದ ಸಾಮಾನ್ಯ ದುರ್ಬಲತೆ ಇವೆಲ್ಲದರಿಂದ ಈ ಶಸ್ತ್ರಚಿಕಿತ್ಸೆ ಅತ್ಯಂತ ಸಂಕೀರ್ಣ ಮತ್ತು ಹೆಚ್ಚಿನ ಅಪಾಯದ್ದಾಗಿತ್ತು ಮತ್ತು ಹೈ ರಿಸ್ಕ್ ಪೇಷಂಟ್ ಎಂದು ಪರಿಗಣಿಸಲಾಗಿತ್ತು. ರೋಗಿ ಪಡುತ್ತಿರುವ ನೋವು , ಬವಣೆಯನ್ನು ನಿವಾರಿಸಲು ಕಣ್ಣನ್ನು ಶಸ್ತ್ರಚಿಕಿತ್ಸೆ ಯ ಮೂಲಕ ತೆಗೆಯುವ ಅನಿವಾರ್ಯ ಸವಾಲು ವೈದ್ಯಕೀಯ ತಂಡದ ಎದುರಿತ್ತು.

ಈ ಸವಾಲನ್ನು ಸ್ವೀಕರಿಸಿದ ನೇತ್ರವೈದ್ಯಕೀಯ ವಿಭಾಗದ ಡಾ. ಚಿದಾನಂದ ಕುಲಕರ್ಣಿ ಅವರ ತಂಡ ಮತ್ತು ಅನಸ್ಥೇಶಿಯಾ ವಿಭಾಗದ ಸರ್ಜನ್ ಕಮಾಂಡರ್ ಡಾ. ಸುದರ್ಶನ್ ನಾಯಕ್ ಹಾಗೂ ಡಾ. ಅಶ್ವಿನಿ ಶೆಟ್ಟಿಗಾರ್ ಅವರ ತಂಡ ಅತ್ಯುತ್ತಮ ಸಮನ್ವಯ, ಸೂಕ್ಷ್ಮತೆಯಿಂದ ಶಸ್ತ್ರಚಿಕಿತ್ಸಾ ಯೋಜನೆಯನ್ನು ರೂಪಿಸಿತು. ಶಸ್ತ್ರಚಿಕಿತ್ಸೆಗೆ ಮುನ್ನ ಹೃದಯರೋಗ, ರೇಡಿಯಾಲಜಿ ಹಾಗೂ ಆಂತರಿಕ ವೈದ್ಯಕೀಯ ವಿಭಾಗಗಳ ಸಮಗ್ರ ಸಹಕಾರದೊಂದಿಗೆ ಸಂಪೂರ್ಣ ತಪಾಸಣೆ ಮತ್ತು ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಯಿತು.
ವೈದ್ಯಕೀಯ ತಂಡಗಳ ಸಮನ್ವಯತೆ, ತೀವ್ರ ನಿಗಾದ ಮೂಲಕ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಕಣ್ಣಿನ ಹಾಗೂ ಹೆಚ್ಚಿನ ಅಪಾಯದ ರೋಗಿಯ ಶಸ್ತ್ರ ಚಿಕಿತ್ಸೆಯು ಸಾಮಾನ್ಯ ಅರಿವಳಿಕೆಯಡಿ ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ನೆರವೇರಿತು.
ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ನಿಕಟ ನಿಗಾ, ಸಮರ್ಪಕ ನೋವು ನಿವಾರಣೆಯ ಚಿಕಿತ್ಸೆ ಹಾಗೂ ಅಗತ್ಯ ಸಹಾಯಕ ಆರೈಕೆಯನ್ನು ನೀಡಲಾಯಿತು. ಶಸ್ತ್ರಚಿಕಿತ್ಸೆಯ ಗಾಯ ಉತ್ತಮವಾಗಿ ಗುಣಮುಖವಾಗುತ್ತಿದ್ದು, ರೋಗಿಗೆ ಇದ್ದ ತೀವ್ರ ನೋವು ಗಮನಾರ್ಹವಾಗಿ ಕಡಿಮೆಯಾಗಿದೆ.
ಈ ಯಶಸ್ವಿ ಶಸ್ತ್ರಚಿಕಿತ್ಸೆ ಆಸ್ಪತ್ರೆಯ ವೈದ್ಯಕೀಯ ತಂಡದ ಉತ್ತಮ ಸಮನ್ವಯ, ಸೂಕ್ಷ್ಮ ಯೋಜನೆ ಮತ್ತು ಉನ್ನತ ನಿಪುಣತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಇಂತಹ ಅಪರೂಪದ ಮತ್ತು ಹೆಚ್ಚಿನ ಅಪಾಯದ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿದ ಬಗ್ಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ರವರು ವೈದ್ಯಕೀಯ ತಂಡವನ್ನು ಅಭಿನಂದಿಸಿದ್ದು ಕಾರ್ಕಳದಂತಹ ಪುಟ್ಟ ಪಟ್ಟಣದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಆಸ್ಪತ್ರೆಯ ಮುಕುಟಕ್ಕೆ ಯಶಸ್ಸಿನ
ಗರಿಯೊಂದು ಸೇರಿಕೊಂಡಂತಾಗಿದೆ ಎಂದರು.
