ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಮತ್ತು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಂಯುಕ್ತ ಆಶ್ರಯದಲ್ಲಿ ಮಾ. 24ರಂದು ವಿಶ್ವ ಕ್ಷಯರೋಗ ದಿನಾಚರಣೆಯನ್ನು ಈ ವರ್ಷದ ಘೋಷ ವಾಕ್ಯವಾದ “ಹೌದು, ಭಾರತದ ನೇತೃತ್ವದಲ್ಲಿ ನಾವು ಕ್ಷಯ ರೋಗವನ್ನು ನಿರ್ಮೂಲನೆ ಮಾಡಬಹುದು” ಎನ್ನುವುದರೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಇಲ್ಲಿ ದೀಪ ಪ್ರಜ್ವಲನೆಯೊಂದಿಗೆ ಆಚರಿಸಲಾಯಿತು.
ದೀಪವನ್ನು ಬೆಳಗಿಸಿದ ರೋಟರಿ ಮಾಜಿ ಜಿಲ್ಲಾ ಗವರ್ನರ್ ರೊಟೇರಿಯನ್ ಡಾ. ಭರತೇಶ್ ಆದಿರಾಜ್ ಕ್ಷಯ ರೋಗದಲ್ಲಿ ಆರೋಗ್ಯ ಸಂಸ್ಥೆಯ ಪಾತ್ರಗಳ ಬಗ್ಗೆ ತಿಳಿಸಿದರು. ಹಾಗೆಯೇ ತೊಡಕಿನ ಗರ್ಭಧಾರಣೆಯಲ್ಲಿ ತಾಯಂದಿರು ವಹಿಸಬೇಕಾದ ಮುಂಜಾಗ್ರತೆ ಬಗ್ಗೆ ತಿಳಿಸಿದರು.
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷರಾದ ಸುರೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿ ಮುಂದಿನ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಘಟಕದೊಂದಿಗೆ ಸಹಕಾರ ನೀಡುವ ಬಗ್ಗೆ ತಿಳಿಸಿದರು.
ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಿಂದ ಆಗಮಿಸಿದ ಪಿಹೆಚ್‌ಸಿಒ ಶ್ರೀಮತಿ ವೆರೋನಿಕಾ, ಬಿಹೆಚ್‌ಇಒ ಶ್ರೀಮತಿ ಸುಶೀಲಾ .ಕೆ ಇವರು ಸಮುದಾಯ ಸಹಭಾಗಿತ್ವದ ಮಹತ್ವ ಮತ್ತು ಹೆಚ್‌ಪಿವಿ ಲಸಿಕೆಯ ಬಗ್ಗೆ ಮನವರಿಕೆ ಮಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಆಡಳಿತ ವೈದ್ಯಾಧಿಕಾರಿ ಡಾ ವಿದ್ಯಾ ಎಸ್ ಕಿದಿಯೂರು ಇವರು ಮಾತನಾಡಿ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ವೇಳೆ ಜ್ವರ, ತೂಕದಲ್ಲಿ ಗಣನೀಯ ಕಡಿಮೆಯಾಗುವುದು, ಹಸಿವು ಇಲ್ಲದಿರುವುದು, ಕಫದಲ್ಲಿ ರಕ್ತ ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಈ ಲಕ್ಷಣಗಳುಳ್ಳ ಯಾವುದೇ ವ್ಯಕ್ತಿಯ ಮಾಹಿತಿ ಇದ್ದರೆ ಕಡ್ಡಾಯವಾಗಿ ಕಫ ಪರೀಕ್ಷೆ ಮಾಡಿಸಲು ಮನವೊಲಿಸಬೇಕಾಗಿ ಕರೆ ನೀಡಿದರು. ಸಮಾಜದಲ್ಲಿ ಇದರ ಬಗ್ಗೆ ಭಯ ಬೇಡ, ಚಿಕಿತ್ಸೆಯು ಸಂಪೂರ್ಣ ಪಡೆಯುವುದು ಮುಖ್ಯ. ಪೌಷ್ಟಿಕ ಆಹಾರ ಸೇವನೆ, ರೋಗಿಯ ವೈಯಕ್ತಿಕ ಕೆಟ್ಟ ಅಭ್ಯಾಸಗಳು ಸಹ ಪ್ರಭಾವ ಬೀರುವುದು. ನಮ್ಮ ಗ್ರಾಮವು ಕ್ಷಯ ಮುಕ್ತ ಗ್ರಾಮವಾಗಲು ತಮ್ಮೆಲ್ಲರ ಸಹಕಾರ ಬೇಕೆಂದು ತಿಳಿಸಿದರು.
ಮಾರ್ಚ್ 24 ರಿಂದ 100 ದಿನಗಳ ಕ್ಷಯ ಮುಕ್ತ ಭಾರತ ಅಭಿಯಾನದಡಿಯಲ್ಲಿ ಬಲವಾದ ಮೇಲ್ವಿಚಾರಣೆ, ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ಸಮುದಾಯದ ಭಾಗವಹಿಸುವಿಕೆ ಯೊಂದಿಗೆ 2030 ರೊಳಗೆ ಕ್ಷಯ ಮುಕ್ತ ಭಾರತ ಗುರಿ ಸಾಧಿಸಿ ಕ್ಷಯ ರೋಗ ನಿರ್ಮೂಲನೆ ಮಾಡಲು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಪಂಚಾಯತ್ ಸದಸ್ಯರಾದ ಶ್ರೀಮತಿ ರೀನಾ ಕ್ಯಾಥರಿನ್ ಫೆರ್ನಾಂಡಿಸ್, ಉದಯ ಕುಮಾರ್ ಶೆಟ್ಟಿ ಹಾಗೂ ಶ್ರೀಮತಿ ಶೋಭಾ ಭಾಸ್ಕರ್, ಹಂಝ, ಮುರುಗೇಶ್ ಉಪಸ್ಥಿತರಿದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗ ಮತ್ತು ಕ್ಷಯರೋಗದ ಚಿಕಿತ್ಸೆ ಪಡೆಯುತ್ತಿರುವ ಫಲಾನುಭವಿಗಳು, ಚಿಕಿತ್ಸೆ ಪೂರ್ಣಗೊಂಡವರು, ಸಂಪರ್ಕಿತರು ಈ ಕಾಯಿಲೆ, ಚಿಕಿತ್ಸೆ ಮತ್ತು ಆರೋಗ್ಯ ಸಿಬ್ಬಂದಿ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಕುಮುದಾವತಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀಮತಿ ಸುನೀತಾ ಪೂಜಾರಿ ಪ್ರಾರ್ಥನೆ ಗೈದು, ಕುಮಾರಿ ಸ್ವರ್ಣ ಧನ್ಯವಾದವಿತ್ತರು.
