ಮೂಡುಬಿದಿರೆ :ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜು, ಮೂಡುಬಿದಿರೆಯಲ್ಲಿ ಡ್ರೀಮ್ಸ್ ಆನ್ ಪೇಜ್- ನೋಟ್ ಬುಕ್ ವಿತರಣಾ ಕಾರ್ಯಕ್ರಮವನ್ನು ಜೂ. 18ರಂದು ಜರಗಿತು.
ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರು ಮತ್ತು ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಸುರೇಶ್ ಪ್ರಭು ಮಾತನಾಡಿ ಶಿಕ್ಷಣವು ವ್ಯಕ್ತಿಯ ಜೀವನವನ್ನು ರೂಪಿಸುವ ಶಕ್ತಿಯಾಗಿದೆ. ವಿದ್ಯಾರ್ಥಿಗಳ ಯಶಸ್ಸಿನ ಪಯಣದಲ್ಲಿ ಪುಸ್ತಕಗಳು ಮತ್ತು ನೋಟ್ ಬುಕ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಇಂದು ವಿತರಿಸಲಾಗುತ್ತಿರುವ ಈ ನೋಟ್ ಬುಕ್ ಕೇವಲ ಬರೆಯುವ ಸಾಧನಗಳಲ್ಲ; ಅವು ನಿಮ್ಮ ಕನಸುಗಳು, ಗುರಿಗಳು ಮತ್ತು ಭವಿಷ್ಯದ ಯಶಸ್ಸಿನ ಅಡಿಪಾಯಗಳಾಗಿವೆ. ಇದೇ ಆಶಯವನ್ನು ಇಟ್ಟುಕೊಂಡು ದಾನಿಗಳು ಪ್ರೇರಣಾದಾಯಕವಾಗಿ ಬರೆಯುವ ಪುಸ್ತಕಗಳನ್ನು ನೀಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಿ ಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸಬೇಕು. ಮುಂದಿನ ದಿನಗಳಲ್ಲಿ ನೀವೂ ಈ ರೀತಿ ಸ್ಫೂರ್ತಿದಾಯಕ ವ್ಯಕ್ತಿಗಳಾಗಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಹಾಗೂ ನ್ಯೂ ಪಡಿವಾಳ್ಸ್ ಹೋಟೆಲ್ ಪಾಲುದಾರರಾದ ವಿಥುನ್ ಶೆಟ್ಟಿ, ಜನಾರಿಯೊ ಡಿಕೊಸ್ತ ಮತ್ತು ಪದ್ಮನಾಭ ಕಾಮತ್ ಅವರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್ ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆ. ವಿಜಯಲಕ್ಷ್ಮಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ಕಾರ್ಯಕ್ರಮ ನಿರೂಪಿಸಿದರು.
