ಸಾಹಿತ್ಯ, ಓದು, ಯುವ ಮನಸುಗಳನ್ನು ಪುಸ್ತಕದೆಡೆಗೆ ಸೆಳೆಯಬೇಕೆನ್ನುವ ಸದುದ್ದೇಶದಿಂದ ಕ್ರಿಯೇಟಿವ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪುಸ್ತಕ ಮನೆ ವತಿಯಿಂದ ಕ್ರಿಯೇಟಿವ್ ಪುಸ್ತಕ ಧಾರೆ 2026 ಮೂರನೆಯ ಆವೃತ್ತಿಯ ಕಾರ್ಯಕ್ರಮ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ನಡೆಯಿತು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ವಿ.ಸುನಿಲ್ ಕುಮಾರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತುಗಳನ್ನಾಡುತ್ತಾ, ಪುಸ್ತಕ ಬೆಳೆಸುವ ಕಾರ್ಯವನ್ನು ಪುಸ್ತಕ ಮನೆ ಮಾಡುತ್ತಿದ್ದು, ಗೂಗಲ್ ವಾಟ್ಸಪ್‌ಗಳು ಜ್ಞಾನವನ್ನು ನೀಡಿದರೆ ವಿಶೇಷ ಅನುಭವವನ್ನು ಕೊಡುವ ಕೆಲಸವನ್ನು ಪುಸ್ತಕಗಳು ಮಾಡುತ್ತವೆ. ಪುಸ್ತಕಗಳು ಒಬ್ಬ ವ್ಯಕ್ತಿಯ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪುಸ್ತಕವನ್ನು ಓದುವ ಅಭ್ಯಾಸವನ್ನು ಇಂದಿನ ಯುವ ಸಮುದಾಯ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತ, ಕಿರಿಯ ಬರಹಗಾರರಿಗೆ ಒಳ್ಳೆಯ ವೇದಿಕೆಯನ್ನು ಕಲ್ಪಿಸಿ ಕೊಡುವುದು ಮತ್ತು ಹಿರಿಯ ಪ್ರಭುತ್ವ ಬರಹಗಾರರ ಬರಹಗಳನ್ನು ಪ್ರಕಟಿಸುವ ಧ್ಯೇಯವನ್ನು ಇಟ್ಟುಕೊಂಡು ಯುವ ಮನಸುಗಳಲ್ಲಿ ಓದುವ ಅಭಿರುಚಿ ಬೆಳೆಸುವುದು ಪುಸ್ತಕಧಾರೆ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇಲ್ಲಿಯವರೆಗೆ ಒಟ್ಟು ಪುಸ್ತಕ ಮನೆಯ ವತಿಯಿಂದ ೧೦೪ ಕೃತಿಗಳು ಪ್ರಕಟಗೊಂಡಿವೆ ಎಂದು ಪುಸ್ತಕ ಮನೆ ನಡೆದು ಬಂದ ಹಾದಿಯನ್ನು ವಿವರಿಸುತ್ತಾ ಸರ್ವರನ್ನು ಉದ್ದೇಶಿಸಿ ಸ್ವಾಗತಿಸಿದರು.

ಖ್ಯಾತ ಪತ್ರಕರ್ತರಾದ ಅಜಿತ್ ಹನುಮಕ್ಕನವರ್ ವ್ಯಕ್ತಿಯಲ್ಲಿ ಮಾತನಾಡುವ ವಿಷಯಗಳು ಮತ್ತು ಅವನು ವ್ಯಕ್ತಪಡಿಸುವ ಶಬ್ದ ಭಂಡಾರವಿದ್ದಾಗ ಮಾತ್ರ ಆತ್ಮವಿಶ್ವಾಸ ಬರುವುದು ಆ ಆತ್ಮವಿಶ್ವಾಸವನ್ನು ನೀಡುವ ಕೆಲಸ ಪುಸ್ತಕಗಳಿಂದ ಸಾಧ್ಯವಾಗುತ್ತದೆ. ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಹೇಳುವುದೇ ಶಿಕ್ಷಣ ಎಂದು ತಿಳಿಸಿದರು.

ಪುಸ್ತಕ ಮನೆ ವತಿಯಿಂದ 25 ಕೃತಿಗಳು ಲೋಕಾರ್ಪಣೆ:
ಪುಸ್ತಕಧಾರೆ ಕಾರ್ಯಕ್ರಮದಲ್ಲಿ ನಾಡಿನ ಶ್ರೇಷ್ಠ ಬರಹಗಾರರಿಂದ ರಚಿತವಾದ ಸುಮಾರು 25 ಕೃತಿಗಳು ಲೋಕಾರ್ಪಣೆಗೊಂಡವು, ಹೊಸ ಪಟ್ಟಣ, ಖ್ಯಾತ ಶಿಕ್ಷಣ ಸಿದ್ದಾಂತಿಗಳು, ಪೀಯೂಷಾಬ್ರುತಮೃತ, ಸುಭಾಷಿತ ಸಾಗರ, ಬದುಕಿನ ಕನ್ನಡಿಯಲ್ಲಿ, ಭಾವಮುದ್ರೆ, ದೇವಯಾನ, ತರ್ಕಕ್ಕೆ ನಿಲುಕದ್ದು, ಸಮುದ್ರ ಮಾತಾಡಿತು, ನಿತ್ಯದ ನೋಟಗಳಿಗೆ ನಿರುತ್ತರ, ಅಪ್ಪನ ಅಂಗಡಿ, ಚಿಗುರು ಚಿಗುಟಿದ ಪೇಸ್ಬುಕ್, ಗೆಲುವಿನ ದಾರಿ, ನದಿಯಂಚಿನ ನಡಿಗೆ, ಚಂದನವ ಕಡಿದು ತೇದೊಡೆ , ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು, ಮೌನ ಈ ಮಳೆಬಿಲ್ಲು, ನಂಬಿಕೆ, ಗೆಲುವಿನ ಏಣಿ, ಅಂತರಂಗ ಯಾನ, ಮೌಲ್ಯದರಿವಿನ ಹೊಂಬೆಳಕು, ನೀಲಿ, ಒಲವೇ ಹಾಡಾಗಿದೆ, ಸಾಹಿತ್ಯ ವಿಸ್ಮಯ ಮತ್ತು ರಣರಂಗ ಪುಸ್ತಕಗಳು ಲೋಕಾರ್ಪಣೆಗೊಂಡವು.

ಈ ಸಂದರ್ಭದಲ್ಲಿ ಶಶಿಧರ್ ಹಾಲಾಡಿಯವರ ನದಿ ದಾಟಿ ಬಂದವರು ಪುಸ್ತಕಕ್ಕೆ ಉತ್ತಮ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಕ್ಷರಾದ ಡಾ. ಧನಂಜಯ್ ಕುಂಬ್ಳೆ, ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್, ಆದರ್ಶ ಎಂ. ಕೆ. ಡಾ. ಗಣನಾಥ ಶೆಟ್ಟಿ, ಗಣಪತಿ ಭಟ್ ಕೆ .ಎಸ್., ವಿಮಲ್ ರಾಜ್, ಅಮೃತ್ ಯು ರೈ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಲೋಹಿತ್ ಎಸ್ ಕೆ ನಿರೂಪಿಸಿದರು.

ಸಂವಾದ: ಯುವಶಕ್ತಿ ಸಾಹಿತ್ಯ ಮತ್ತು ಮಾಧ್ಯಮ: ರಾಷ್ಟ್ರೀಯತೆಯ ಹೊಸ ಆಯಾಮಗಳು ಎಂಬ ವಿಷಯದ ಕುರಿತು ಶ್ರೀ ಅಜಿತ್ ಹನುಮಕ್ಕನವರ್ ರೊಂದಿಗೆ ಶ್ರೀ ಅವಿನಾಶ್ ಕಾಮತ್ ಸಂವಾದವನು ನಡೆಸಿಕೊಟ್ಟರು.
ಕನ್ನಡದ ಕವಿ ಶ್ರೇಷ್ಠರ ಅಮರ ಗೀತೆಗಳ ಸಂಗೀತ ಯಾನ ಭಾವ ನಮನ ಕಾರ್ಯಕ್ರಮವು ನಾಡಿನ ಹೆಸರಾಂತ ಗಾಯಕರಿಂದ ನಡೆಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಕಳದ ಸಾಹಿತ್ಯ ಅಭಿಮಾನಿಗಳು, ಉಪಸ್ಥಿತರಿದ್ದರು.
