ಆದಿತ್ಯ ಟ್ರಸ್ಟ್ (ರಿ) ನಕ್ರೆ ಕಾರ್ಕಳ ಇವರ ಸಹಭಾಗಿತ್ವದಲ್ಲಿ ದಿ ಯಶವಂತಿ ಎಸ್ ಸುವರ್ಣ ಇವರ ತೃತೀಯ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಅವರ ಪುತ್ರಿ ಪ್ರೊ ಉಷಾ ಎಸ್ ಸುವರ್ಣ ಇವರ ಪ್ರಾಯೋಜಕತ್ವದೊಂದಿಗೆ ನಕ್ರೆ ಪ್ರೌಢ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮ ಜು. 06ರಂದು ಸರಕಾರಿ ಪ್ರೌಢ ಶಾಲೆ ನಕ್ರೆ ಇಲ್ಲಿ ಜರಗಿತು.

ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಬಿಪಿನ್ ಚಂದ್ರ ಪಾಲ್ ಇವರು ಯಶವಂತಿ ಎಸ್ ಸುವರ್ಣರವರ ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ
ನಂತರ ಅವರು ಮಾತನಾಡಿ ಒಂದು ಪೂರ್ಣ ವಾದ ವಸ್ತುವಿನಿಂದ ಪೂರ್ಣವಾದ ವಸ್ತುವೇ ಹುಟ್ಟಿಕೊಳ್ಳುತ್ತದೆ. ಇದು ಪೂರ್ಣ, ಅದು ಪೂರ್ಣ. ಒಂದು ದೀಪದ ಜ್ಯೋತಿಯಿಂದ ಇನ್ನೊಂದು ಪೂರ್ಣವಾದ ಜ್ಯೋತಿಯು ಹುಟ್ಟಿಕೊಳ್ಳುತ್ತದೆ. ಯಶವಂತಿ ಎಸ್ ಸುವರ್ಣರು ಪರಿಪೂರ್ಣವಾದ ಬದುಕಿನೊಂದಿಗೆ ಸಮಾಜದಲ್ಲಿ ತಾವು ಬೆಳಗಿದರು, ಇತರ ಸಾಮಾನ್ಯ ಜನರ ಬಾಳನ್ನು ಬೆಳಗಿಸಿದರು ಎಂದರು.
ಮುಖ್ಯ ಅತಿಥಿ ಶಂಕರ ಪೂಜಾರಿ ಇವರು ಯಶವಂತಿ ಸುವರ್ಣರ ಸಾಮಾಜಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ತಿಳಿಸಿದರು.
ಟಿ ಸಿ ಬಿ ನಿರ್ದೇಶಕ, ದೈಹಿಕ ಶಿಕ್ಷಣ ಶಿಕ್ಷಕರಾದ ಆನಂದ ಪೂಜಾರಿ ಇವರು ಸಮಾಜದಲ್ಲಿರುವ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಆದಿತ್ಯ ಟ್ರಸ್ಟ್ ಉತ್ತಮವಾದ ಕೆಲಸ ಮಾಡುತ್ತಿದೆ. ಮುಖ್ಯವಾಗಿ ವಿಕಲ ಚೇತನ ಫಲಾನುಭವಿಗಳಿಗೆ ದಾನಿಗಳ ನೆರವಿನಿಂದ ಸಹಾಯ ಹಸ್ತವನ್ನು ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕುವಲ್ಲಿ ಸಹಾಯ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ ಉಷಾ ಎಸ್ ಸುವರ್ಣ ಮಾತನಾಡಿ ಬದುಕಿನಲ್ಲಿ ಬರುವ ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸಬೇಕು. ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣವನ್ನು ಪಡೆದಾಗ ಉತ್ತಮ ವ್ಯಕ್ತಿತ್ವವನ್ನು ಗಳಿಸಿಕೊಂಡು ಬದುಕಬಹುದು. ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ತಮ್ಮ ತಾಯಿ ಯಶವಂತಿ ಸುವರ್ಣರು ಅನೇಕ ಸಾಹಿತ್ಯ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗ ತಮಗೆ ಇವತ್ತು ಇಷ್ಟು ವಿಸ್ತಾರವಾಗಿ ಬೆಳೆಯಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ದಾನಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು, ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.
ಆದಿತ್ಯ ಟ್ರಸ್ಟಿನ ಅಧ್ಯಕ್ಷ ಮಂಜುನಾಥ್ ತೆಂಕಿಲ್ಲಾಯ ಸ್ವಾಗತಿಸಿದರು, ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯ ವಿಷ್ಣು ಹೆಗಡೆ ವಂದಿಸಿದರು, ಶಿಕ್ಷಕ ಸಂತೋಷ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆದಿತ್ಯ ಟ್ರಸ್ಟಿನ ಕಾರ್ಯದರ್ಶಿ ರಮೇಶ್ ನಕ್ರೆ ಕಾರ್ಯಕ್ರಮ ಸಂಯೋಜನೆ ಮಾಡಿದರು.
ಕು.ರಕ್ಷಾ, ಕು ಶೋಭಿತ ಸಹಕರಿಸಿದರು.
