ಕಾರ್ಕಳಹೆಬ್ರಿ

ಕಸ್ತೂರಿ ರಂಗನ್ ವರದಿ : ಜನರಲ್ಲಿ ಗೊಂದಲ ಸೃಷ್ಠಿಸುತ್ತಿರುವ ಕೇಂದ್ರ ಸರ್ಕಾರ – ಜನರ ಮನದಲ್ಲಿ ಆತಂಕ : ಸಂಸದರ ಮೌನ ! – ಮುದ್ರಾಡಿ ಮಂಜುನಾಥ ಪೂಜಾರಿ ಆಕ್ರೋಶ !

ಹೆಬ್ರಿ : ಕಸ್ತೂರಿರಂಗನ್ ವರದಿ ವಿಚಾರದಲ್ಲಿ 2008 ರಿಂದಲೂ ಕೇಂದ್ರದ ಬಿಜೆಪಿ ಸರ್ಕಾರವು ಜನತೆಗೆ ಗೊಂದಲ ಸೃಷ್ಠಿಸುತ್ತಲೇ ಬಂದಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ವರದಿಯನ್ನು ತಿರಸ್ಕರಿಸಿದ್ದರೂ ಇದೀಗ ಮತ್ತೇ ನೋಟಿಫಿಕೇಶನ್ ಜಾರಿ ಮಾಡುವ ಮೂಲಕ ಮತ್ತೇ ಆತಂಕ ಸೃಷ್ಠಿಸಿದೆ. ಇದೆಲ್ಲವೂ ನಮ್ಮ ಸಂಸದರು, ಶಾಸಕರ ಮೌನದಿಂದಲೇ ಆಗುತ್ತಿದೆ. ಇದೀಗ ಕೇಂದ್ರ ಸರ್ಕಾರದಲ್ಲಿ ಲೋಕಸಭಾ ಅಧಿವೇಶನ ನಡೆಯುತ್ತಿದೆ. ಮಲೆನಾಡು ವ್ಯಾಪ್ತಿಯ ಸಂಸದರು ಲೋಕಸಭೆಯಲ್ಲಿ ಮಾತನಾಡಿ ರಾಜ್ಯಕ್ಕೆ ಆಗುವ ಅನ್ಯಾಯವನ್ನು ತಪ್ಪಿಸಲಿ ಎಂದು ಕಾಂಗ್ರೆಸ್ ನಾಯಕರಾದ ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ಮಂಗಳವಾರ ಹೆಬ್ರಿಯ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಿದ್ಧರಾಮಯ್ಯ ನವರು ಪ್ರಥಮ ಸಲ ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಮತ್ತು 2ನೇ ಸಲದ ಸರ್ಕಾರದಲ್ಲಿ ಜನರ ಮನವಿಗೆ ಸ್ಪಂದಿಸಿ ಕರ್ನಾಟಕ ರಾಜ್ಯದಲ್ಲಿ ಕಸ್ತೂರಿರಂಗನ್ ವರದಿಯನ್ನೇ ತಿರಸ್ಕಸಿದೆ. ಅದಕ್ಕಾಗಿ ಅಂದಿನ ಅರಣ್ಯ ಸಚಿವರಾಗಿದ್ದ ರಾಮನಾಥ ರೈ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅಂದು ಉಸ್ತುವಾರಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆಯವರ ನೇತ್ರತ್ವದಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಗ್ರಾಮ ಗ್ರಾಮದಲ್ಲಿ ಅಧ್ಯಯನ ಮಾಡಿ ಸರ್ಕಾರಕ್ಕೆ ಜನಾಭಿಪ್ರಾಯವನ್ನು ನೀಡಿದ್ದರು. ಅದರ ಅಭಿಪ್ರಾಯದಂತೆ ಕರ್ನಾಟಕ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನೇ ತಿರಸ್ಕರಿಸಿದೆ. ಡಿ.ಕೆ.ಶಿವಕುಮಾರ್ ಸರ್ಕಾರ ಕೂಡ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಲಿದೆ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಚುನಾವಣೆ ಸಮೀಪಿಸುವಾಗ ನೋಟಿಫಿಕೇಶನ್ ಜಾರಿ : ಜನರಿಗೆ ಆತಂಕ : ಮತ ಪಡೆಯುವ ಹುನ್ನಾರ !

ಕೇಂದ್ರದ ಬಿಜೆಪಿ ಸರ್ಕಾರವು ನಿರಂತರವಾಗಿ ಚುನಾವಣೆಗಳು ಸಮೀಪಿಸುತ್ತಿರುವಾಗಲೇ ಕಸ್ತೂರಿರಂಗನ್ ವರದಿಯ ನೋಟಿಫಿಕೇಶನ್ ಜಾರಿ ಮಾಡುತ್ತ ಬಂದಿದೆ. ಈಗ ಈ ಸಲವೂ ಹಾಗೇಯೆ ಮಾಡಿ. 7ನೇ ನೋಟಿಫೀಕೇಶನ್ ಮಾಡಿದ್ದಾರೆ. ಮುಂದೆ ನಾಲ್ಕೈದು ತಿಂಗಳಿನಲ್ಲಿ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದ್ದು ಅದಕ್ಕಾಗಿ ಜನರಲ್ಲಿ ಆತಂಕ ಭಯ ಹುಟ್ಟಿಸಿ ಮತ ಪಡೆಯಲು ಬಿಜೆಪಿ ಸರ್ಕಾರ ಹುನ್ನಾರ ಮಾಡಿದೆ. ಜನರ ಬದುಕಿನಲ್ಲಿ ಆಟ ಆಡಬೇಡಿ. ಕರ್ನಾಟಕ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಬೇಡಿ, 20 ವರ್ಷಗಳಿಂದ ಅಧಿಕಾರದಲ್ಲಿರುವ ನೀವು ಏನು ಮಾಡಿದ್ದೀರಿ. ಜನರ ಧ್ವನಿಯಾಗಬೇಕಾದ ನೀವು ಜನರ ಬದುಕು ಕಸಿಯುತ್ತಿದ್ದೀರಿ, ನಿಜವಾಗಿ ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡುತ್ತಿರಲಿಲ್ಲ ಎಂದು ಹೇಳಿದ ಮಂಜುನಾಥ ಪೂಜಾರಿ, ಹೆಬ್ರಿ ತಾಲ್ಲೂಕು ಸಂಪೂರ್ಣ ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರಲಿದೆ. ಕುಂದಾಪುರ ಮತ್ತು ಕಾರ್ಕಳ ತಾಲ್ಲೂಕಿನ ಮುಕ್ಕಾಲು ಭಾಗ ಬರಲಿದೆ ಎಂದು ತಿಳಿಸಿದರು.

ರಾಜ್ಯದ ಸಂಸದರ ಮೌನ.!
ಕಸ್ತೂರಿ ರಂಗನ್ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಎಲ್ಲಾ ಸಂಸದರು ಬಿಜೆಪಿಯವರೇ ಆಗಿದ್ದಾರೆ. ಜಾರಿ ಗೊಳಿಸುವಾಗ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವರಾಗಿದ್ದರು. ಆಗಲೂ ಅವರು ಮೌನವಾಗಿದ್ದರು. ಮೈಸೂರು ಸಂಸದ ಯಧುವೀರ ಶ್ರೀಕಂಠದತ್ತ ಒಡೆಯರ್, ಮಂಗಳೂರು ಸಂಸದ ಬ್ರಿಜೇಶ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅಂತಹ ಪ್ರಭಾವಿಗಳು ನಾಯಕರ ಕ್ಷೇತ್ರದಲ್ಲಿ ಕಸ್ತೂರಿರಂಗನ್ ವರದಿ ನೋಟಿಫಿಕೇಶನ್ ಜಾರಿಯಾಗಿದೆ. ಜನತೆ ಆತಂಕದಲ್ಲಿದ್ದಾರೆ. ಸಂಸದರು ಶಾಸಕರು ಯಾರೂ ತುಟಿ ಬಿಚ್ಚುತ್ತಿಲ್ಲ, ಪದೇ ಪದೇ ನೋಟಿಫೀಕೇಶನ್ ಜಾರಿ ಮಾಡಿ ಮತ್ತೇ ಮತ್ತೇ ಭಯ ಹುಟ್ಟಿಸುತ್ತಿದ್ದಾರೆ ಹೊರತು ಜನರ ಸಮಸ್ಯೆ ದೂರ ಮಾಡುತ್ತಿಲ್ಲ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ಆರೋಪಿಸಿದರು.

60 ದಿನಗಳ ಅವಧಿಯ ನೋಟಿಫಿಕೇಶನ್ ಸಂಸದರೇ ಹೊಣೆ :
ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುವಾರ ಇದೀಗ 60 ದಿನಗಳ ಅವಧಿಯ ನೋಟಿಫೀಕೇಶನ್ ಜಾರಿ ಮಾಡಿ ಭಯಗೊಳಿಸಿದ್ದಾರೆ. ಜನರಿಗೆ ಅನ್ಯಾಯವಾದರೆ ಅದಕ್ಕೆಲ್ಲ ಸಂಸದರೆ ಹೊಣೆಯಾಗುತ್ತಾರೆ. ಕೇಂದ್ರ ಸರ್ಕಾರದಲ್ಲಿ ಕಸ್ತೂರಿರಂಗನ್ ವರದಿಯನ್ನು ರದ್ದು ಪಡಿಸಿ ಜನರ ಆತಂಕ ದೂರ ಮಾಡಿ ಎಂದು ಒತ್ತಾಯಿಸಿದ ಮಂಜುನಾಥ ಪೂಜಾರಿ ಡಿ.ಕೆ.ಶಿವಕುಮಾರ್ ನೇತ್ರತ್ವದ ಸರ್ಕಾರ ಜನರ ಭಾವನೆ ಅರ್ಥ ಮಾಡಿಕೊಂಡು ಸಮಸ್ಯೆಯನ್ನು ದೂರ ಮಾಡಲಿದೆ. ನಾವು ಮುಖ್ಯಮಂತ್ರಿಯವರನ್ನು ಬೇಟಿ ಮಾಡಿ ಮನವರಿಕೆ ಮಾಡಲಿದ್ದೇವೆ, ಬಿಜೆಪಿ ಸರ್ಕಾರ ಮತ್ತು ನಾಯಕರು ಏನು ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.

ಜನರ ಬದುಕುವ ಹಕ್ಕನ್ನು ಉಳಿಸಲು ಅಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರಗಳು ಅರಣ್ಯ ಹಕ್ಕು ಕಾಯಿದೆ, ಆಹಾರ ಭದ್ರತಾ ಕಾಯಿದೆ, ಅಕ್ರಮ ಸಕ್ರಮ ಕಾನೂನು ಜಾರಿ ಮಾಡಿ ಜನರ ಬದುಕು ಭದ್ರಗೊಳಿಸಿದೆ. ಆದರೆ ಬಿಜೆಪಿ ಸರ್ಕಾರ ಡೀಮ್ಡ್ ಫಾರೆಸ್ಟ್, ಕಸ್ತೂರಿರಂಗನ್ ಮೊದಲಾದ ಜನವಿರೋಧಿ ಕಾನೂನುಗಳನ್ನು ಜಾರಿ ಮಾಡಿ ಜನರ ಬದುಕು ಛಿದ್ರಗೊಳಿಸುತ್ತಿದೆ. ಪ್ರಾಣಿಗಳಿಗಿರುವ ಬದುಕುವ ಹಕ್ಕು ಜನರಿಗೆ ಇಲ್ಲವೆ, ಕೇಂದ್ರ ಸರ್ಕಾರದ 7ನೇ ನೋಟಿಫಿಕೇಶನ್ ಕೂಡ ರಾಜ್ಯ ಸರ್ಕಾರ ತಿರಸ್ಕರಿಸುತ್ತದೆ. ಚುನಾವಣೆಯ ಹುನ್ನಾರ ಬಿಜೆಪಿ ಕೈಬಿಡಬೇಕು ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಯಾಲು ಗೋಪಿನಾಥ ಭಟ್, ಪ್ರಚಾರ ಸಮಿತಿಯ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ, ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್, ಪ್ರಮುಖರಾದ ಚಂದ್ರಶೇಖರ ಬಾಯರಿ, ಎಚ್. ಜನಾರ್ಧನ್, ದಿನೇಶ ಶೆಟ್ಟಿ ಚಾರ, ಹೆಚ್.ಬಿ.ಸುರೇಶ್, ರಾಘವೇಂದ್ರ ನಾಯ್ಕ್, ಸಂತೋಷ ನಾಯಕ್ ಕನ್ಯಾನ, ಗುಳ್ಕಾಡು ಭಾಸ್ಕರ ಶೆಟ್ಟಿ, ನಿಲೇಶ ಪೂಜಾರಿ ಉಪಸ್ಥಿತರಿದ್ದರು.

Related posts

ಕ್ರೈಸ್ಟ್‌ಕಿಂಗ್: ಕಾನೂನು ಮಾಹಿತಿ ಕಾರ್ಯಕ್ರಮ

Madhyama Bimba

ಕಡಂದಲೆ ಜೋಡುಕಟ್ಟೆ ಬಳಿ ಧರೆಗುರುಳಿದ ಮರ

Madhyama Bimba

ಸೂರಾಲು: ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಶೈಕ್ಷಣಿಕ ಸಾಮಾಗ್ರಿಗಳ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More