ಮೂಡುಬಿದಿರೆ: ಸಾಹಿತ್ಯ ಸೇವೆಗೆ ವಯಸ್ಸಿನ ನಿರ್ಬಂಧವಿಲ್ಲ ಎನ್ನುವುದಕ್ಕೆ ಶತಾಯುಷಿ ವಿದ್ವಾನ್ ಚಂದ್ರಯ್ಯ ಅವರು ಚಾವುಂಡರಾಯ ದತ್ತಿ ಪ್ರಶಸ್ತಿಗೆ ಭಾಜನರಾಗಿರುವುದೇ ಸಾಕ್ಷಿ. ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್ ತನ್ನ ಘನತೆ ಹೆಚ್ಚಿಸಿಕೊಂಡಂತಾಗಿದೆ ಎಂದು ರಾಜ್ಯ ಉಚ್ಛನ್ಯಾಯಾಯಲದ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ನೇಮಿಚಂದ್ರ ದೇಸಾಯಿ ನುಡಿದರು. ಅವರು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಜರಗಿದ ಚಾವುಂಡರಾಯ ದತ್ತಿ ಹಾಗೂ ಡಾ. ಸಿದ್ಧಲಿಂಗಯ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿ ಮಾತನಾಡಿದರು.
ದತ್ತಿ ಪ್ರಶಸ್ತಿ ಪ್ರದಾನ: ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕೃತಿ ರಚನೆಯ ಸಾಧನೆಗಾಗಿ 2024ನೇ ಸಾಲಿಗೆಹಿರಿಯ ಸಾಹಿತಿ ಶತಾಯುಷಿ ವಿದ್ವಾನ್ ಬಿ. ಚಂದ್ರಯ್ಯ ಅವರಿಗೆ 2025 ರ ಸಾಲಿಗೆ ವಿಜಯಪುರದ ಡಿ.ಎನ್. ಅಕ್ಕಿ ಅವರಿಗೆ ನಗದು ಗೌರವ ಸಹಿತ ರಾಜ್ಯ ಮಟ್ಟದ ಚಾವುಂಡರಾಯ ಪ್ರಶಸ್ತಿ ಪ್ರದಾನ ನಡೆಯಿತು. ಬೆಂಗಳೂರಿನ ಹಿರಿಯ ಸಾಹಿತಿ , ಸಂಶೋಧಕ ಡಾ. ಹೆಚ್.ಆರ್. ಸ್ವಾಮಿ ಅವರಿಗೆ ಡಾ. ಸಿದ್ಧಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾರ್ಥಕ ಭಾವ: ಚಂದ್ರಯ್ಯ
ಜೀವನದ ನೂರನೇ ವಯಸ್ಸಿನಲ್ಲಿ ಸಾಹಿತ್ಯ ಸೇವೆಗಾಗಿ ಚಾವುಂಡರಾಯ ಪ್ರಶಸ್ತಿಯಂತಹ ಗೌರವ ಲಭಿಸಿರುವುದು ಸಾರ್ಥಕ ಭಾವ ತಂದಿದೆ ಎಂದು ಪ್ರಶಸ್ತಿ ಪುರಸ್ಕೃತ ವಿದ್ವಾನ್ ಚಂದ್ರಯ್ಯ ನುಡಿದರು. ಕನ್ನಡ ರಾಜ್ಯೋದಯದ ಸಂದರ್ಭ ಮಡಿಕೇರಿಯಲ್ಲಿ ಖಾದಿ ಕಮಿಶನ್ ಉದ್ಯೋಗಿಯಾಗಿದ್ದ ಸಂದರ್ಭ ಬರೆದ ” ಉದಯವಾಯಿತು ಒಂದು ಗೂಡಿತು ಹರಿದ ಹಿರಿಮೆಯ ಕನ್ನಡ” ಎಂಬ ಆಶಯ ಗೀತೆಯನ್ನು ಹಾಡಿದ ಅವರು ತನಗೆ ದೊರೆತ ಈ ಗೌರವದಿಂದ ಸಂತಸಗೊಂಡಿದ್ದ ಪತ್ನಿ ಸರೋಜಿನಿ ಪ್ರಶಸ್ತಿ ಪ್ರದಾನದ ಮುನ್ನಾ ದಿನ ನಿಧನರಾಗಿದ್ದಾರೆ. ಆದರೆ ಗೀತೆಯ ನಿರ್ಲಿಪ್ತತೆಯೊಂದಿಗೆ ಪ್ರಶಸ್ತಿ ಸ್ವೀಕರಿಸಿ ಪತ್ನಿಯ ಆಶಯ ಪೂರೈಸಿದ ಸಂತಸ ಅನುಭವಿಸುತ್ತಿದ್ದೇನೆ ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಂ.ವಿ.ವಿ. ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ. ರಾಜಪ್ಪ ದಳವಾಯಿ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿ ಅಜಲು ಪದ್ಧತಿ ನಿಷೇಧಿಸುವಲ್ಲಿ ಕಾರಣರಾದ ಸಿದ್ಧಲಿಂಗಯ್ಯ ಅವರ ಬದುಕೊಂದು ಸಾಹಸ ಗೀತೆ ಎಂದರು.
ಗಮಕಿ ವಿದ್ವಾಂಸ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ಸಮ್ಮಾನಿತರನ್ನು ಪರಿಚಯಿಸಿ ರತ್ನಾಕರವರ್ಣಿ ಸಾಂಗತ್ಯದಲ್ಲಿ ರಚಿಸಿದ ಭರತೇಶ ವೈಭವ ಕೃತಿಯನ್ನು ಭಾಮಿನಿ ಷಟ್ಪದಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಭರತೇಶ ವೈಭವಾಮೃತವನ್ನಾಗಿ ನೀಡಿದ ಚಂದ್ರಯ್ಯ ಅವರ ಕೊಡುಗೆ ಅನನ್ಯ . ಇಳಿವಯಸ್ಸಿನಲ್ಲೂ ಅವರು ಮಾಡುತ್ತಿರುವ ಸಾಹಿತ್ಯ ಸೇವೆ ಮಾದರಿ ಎಂದರು.
ದತ್ತಿ ದಾನಿಗಳಾದ ವಿಶ್ರಾಂತ ಪತ್ರಿಕಾ ಸಂಪಾದಕ, ಸಾಹಿತಿ ಡಾ. ಪದ್ಮರಾಜ ದಂಡಾವತಿ ಆಶಯದ ನುಡಿಗಳನ್ನಾಡಿ ಚಂದ್ರಯ್ಯ ಅವರನ್ನು ತಡವಾಗಿಯಾದರೂ ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.
ದತ್ತಿ ದಾನಿ ಶ್ರೀಮತಿ ರಮಾಕುಮಾರಿ ಸಿದ್ದಲಿಂಗಯ್ಯ ಮಾತನಾಡಿ ಮಾನವ ಧರ್ಮ, ಮಾನವೀಯತೆಯ ಸಾಧಕರಿಗೆ ಸಿದ್ಧಲಿಂಗಯ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸುವ ಆಶಯವನ್ನು ವಿವರಿಸಿದರು.
ಪ್ರಶಸ್ತಿ ಪುರಸ್ಕೃತ ಸಾಧಕರಾದ ಡಿ.ಎನ್. ಅಕ್ಕಿ, ಡಾ. ಹೆಚ್.ಆರ್. ಸ್ವಾಮಿ ತಮ್ಮ ಅನಿಸಿಕೆ ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪರಿಷತ್ ಆಡಳಿತಾಧಿಕಾರಿ ಕೆ.ಎ. ದಯಾನಂದ, ( ಐ.ಎ.ಎಸ್.) ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಡಗೀತೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಶ್ರೀಮತಿ ಶಾಂತಕುಮಾರಿ ಕೆ.ಆರ್. ಸ್ವಾಗತಿಸಿ ಚಂದನ ವಾಹಿನಿಯ ಧನಂಜಯ ನಿರೂಪಿಸಿ ವಂದಿಸಿದರು.
ಭಟ್ಟಾರಕ ಶ್ರೀ ಗೌರವಾಭಿನಂದನೆ:
ವಿದ್ವಾನ್ ಬಿ. ಚಂದ್ರಯ್ಯ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮೂಡುಬಿದಿರೆಯ ಶ್ರೀ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಜೈನ ಸಾಹಿತ್ಯ ರಂಗಕ್ಕೆ ಅನನ್ಯ ಕೊಡಗೆ ನೀಡಿ ಪ್ರತಿಷ್ಠಿತ ಚಾವುಂಡರಾಯ ಪ್ರಶಸ್ತಿಗೆ ಭಾಜನರಾದ ಚಂದ್ರಯ್ಯ ಅವರನ್ನು ಅಭಿನಂದಿಸಿದ್ದಾರೆ. ಪ್ರಶಸ್ತಿ ಪ್ರದಾನಕ್ಕೆ ವಾರದ ಮೊದಲೇ ಬೆಂಗಳೂರಿನ ಚಂದ್ರಯ್ಯ ಅವರ ನಿವಾಸಕ್ಕೆ ತೆರಳಿ ಸರೋಜಿನಿಚಂದ್ರಯ್ಯ ದಂಪತಿಯನ್ನು ಶ್ರೀಗಳವರು ಗೌರವಿಸಿದ್ದರು. ಇದೇ ವೇಳೆ ಶ್ರೀ ಮಠದ ವಿವೇಕಾಭ್ಯುದಯ ಮಾಸಿಕದ ಸಂಪಾದಕರಾಗಿ ದೀರ್ಘಾವಧಿಗೆ ಚಂದ್ರಯ್ಯ ಅವರು ಸಲ್ಲಿಸಿರುವ ಸೇವೆಯನ್ನೂ ಶ್ರೀಗಳವರು ಸ್ಮರಿಸಿಕೊಂಡಿದ್ದಾರೆ.
