ಮೂಡುಬಿದಿರೆ ಶಿರ್ತಾಡಿ ರಸ್ತೆಯಲ್ಲಿ ಮಳೆಗಾಲದ ನಂತರ ಉಂಟಾದ ರಸ್ತೆ ಗುಂಡಿಗಳನ್ನು ಕಾಂಕ್ರೀಟ್ ಹಾಕಿ ಮುಚ್ಚುವ ಮೂಲಕ ಯುವಕರ ತಂಡ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೂಡುಬಿದಿರೆಯ ಕೋಟೆಬಾಗಿಲಿನಿಂದ ಶಿರ್ತಾಡಿವರೆಗೆ ರಸ್ತೆಯಲ್ಲಿ ಬಹುಕಾಲದಿಂದ ಉಂಟಾಗಿದ್ದ ಗುಂಡಿಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ ಶಿರ್ತಾಡಿ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕೋಟ್ಯಾನ್ ನೇತೃತ್ವದ ತಂಡ ಈ ಸಮಾಜಮುಖಿ ಕಾರ್ಯ ನಡೆಸಲು ಹೆಜ್ಜೆಯಿಟ್ಟಿದೆ. ಶಿರ್ತಾಡಿಯಲ್ಲಿ ಆಪತ್ಭಾಂಧವರಾಗಿ ಗುರುತಿಸಿಕೊಂಡ ಸೂರಜ್ ಜೈನ್ ಅವರು ರಸ್ತೆ ಅವ್ಯವಸ್ಥೆ ಬಗ್ಗೆ ಸಂತೋಷ್ ಕೋಟ್ಯಾನ್ ಅವರ ಗಮನಕ್ಕೆ ತಂದ ಕೂಡಲೇ ಸಾರ್ವಜನಿಕರ ಹಿತದೃಷ್ಟಿಯಿಂದ ಅವರು ಸ್ಪಂದಿಸಿ ರಸ್ತೆ ಗುಂಡಿಗಳನ್ನು ಮುಚ್ಚಿಸುವ ನಿಸ್ವಾರ್ಥ ಕಾರ್ಯಕ್ಕೆ ಮುಂದಾದರು. ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆಯ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ಮುಚ್ಚಿಸಿದರು. ಸುಮಾರು ನೂರು ಬಟ್ಟಿಯಷ್ಟು ಕಾಂಕ್ರೀಟ್ ಬಳಸಿ ಒಂದು ದಿನ ಬಳಸಿಕೊಂಡು ಗುಂಡಿಗಳನ್ನು ಮುಚ್ಚಲಾಗಿದೆ. ಅವರೊಂದಿಗೆ ಚಂದ್ರ ಎಸ್. ಕೋಟ್ಯಾನ್, ಶ್ರೀಧರ್ ಎಸ್. ಅಮೀನ್, ಸಂದೀಪ್ ಕುಲಾಲ್, ದಿನೇಶ್ ಗಡ್ಡ, ವಿಶ್ವನಾಥ್ ಕಲ್ಲೊಟ್ಟು ಹಾಗೂ ಪ್ರದೀಪ್ ಎಸ್. ಕೋಟ್ಯಾನ್ ಅವರು ಪ್ರತಿಫಲ ಪಡೆದುಕೊಳ್ಳದೆ ನೇರವಾಗಿ ಸ್ಥಳದಲ್ಲಿ ನಿಂತು ಕಾಂಕ್ರೀಟ್ ಹಾಕುವುದು, ಗುಂಡಿಗಳನ್ನು ತುಂಬುವುದು ಸೇರಿದಂತೆ ಶ್ರಮದಾನ ನಡೆಸಿದರು.

ಬಿಸಿಲು, ಧೂಳು ಎನ್ನುವುದನ್ನೂ ಲೆಕ್ಕಿಸದೆ ತಮ್ಮ ಸಮಯವನ್ನು ಮೀಸಲಿಟ್ಟು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಕೆಲಸ ಮಾಡಿದ ಸ್ನೇಹಿತರ ತಂಡದ ಈ ನಿಸ್ವಾರ್ಥ ಸೇವೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಸಮಸ್ಯೆಯ ಬಗ್ಗೆ ಮಾತನಾಡುವುದಕ್ಕಿಂತ, ಎಲ್ಲರೂ ಒಟ್ಟಾಗಿ ಕೈಜೋಡಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂಬುದಕ್ಕೆ ಈ ಕಾರ್ಯವು ಉತ್ತಮ ಉದಾಹರಣೆಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಕೋಟ್ಯಾನ್ ಅವರು “ಸಾರ್ವಜನಿಕರ ಸಮಸ್ಯೆ ನಮ್ಮ ಗಮನಕ್ಕೆ ಬಂದಾಗ ಅದನ್ನು ಯಾರೋ ಒಬ್ಬರು ಪರಿಹರಿಸಬೇಕು ಎಂದು ಕಾಯುವುದಕ್ಕಿಂತ, ನಮ್ಮಿಂದ ಸಾಧ್ಯವಾದಷ್ಟು ತಕ್ಷಣ ಪರಿಹಾರಕ್ಕೆ ಮುಂದಾಗುವುದು ನಮ್ಮ ಜವಾಬ್ದಾರಿ. ಈ ಕಾರ್ಯವನ್ನು ನನ್ನ ಸ್ನೇಹಿತರು ತಮ್ಮದೇ ಕೆಲಸವೆಂಬಂತೆ ಪರಿಗಣಿಸಿ ನನ್ನೊಂದಿಗೆ ನಿಂತು ಬಹಳಷ್ಟು ಶ್ರಮಪಟ್ಟಿದ್ದಾರೆ. ಅವರ ಸಹಕಾರ ಮತ್ತು ಶ್ರಮವೇ ಈ ಕಾರ್ಯದ ಪ್ರಮುಖ ಶಕ್ತಿ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಸಾರ್ವಜನಿಕರಿಗೆ ಸ್ವಲ್ಪವಾದರೂ ಅನುಕೂಲವಾಗಿದ್ದರೆ ನಮ್ಮ ಪ್ರಯತ್ನ ಸಾರ್ಥಕ,” ಎಂದು ಹೇಳಿದರು.
