ಕಾರ್ಕಳ: ಇಲ್ಲಿನ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ “ಮಕ್ಕಳ ಹಬ್ಬ” ಕಾರ್ಯಕ್ರಮ ಅದ್ದೂರಿಯಾಗಿ ಸಂಭ್ರಮ ಸಡಗರದೊಂದಿಗೆ ಸ್ಥಳೀಯ ಗಾಂಧಿ ಮೈದಾನದಲ್ಲಿ ನಡೆಯಿತು.
ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿ ಮಕ್ಕಳ ಹಬ್ಬಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಮಕ್ಕಳಲ್ಲಿ ಜೀವನಕ್ಕೆ ಸ್ಪೂರ್ತಿಯನ್ನು ತುಂಬಿ ಜೀವನೋತ್ಸಾಹ ಮೂಡಿಸುವುದು ಮಕ್ಕಳ ದಿನಾಚರಣೆಯ ಉದ್ದೇಶ. ಮಕ್ಕಳ ಭವಿಷ್ಯ ಉತ್ತಮವಾಗಲು ಸರಿಯಾದ ಮಾರ್ಗದರ್ಶನ ಅಗತ್ಯ. ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆಯನ್ನು ಮಾಡಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು” ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಕಾರ್ಕಳ ಪರ್ಪಲೆ ಸಿಎಸ್‌ಐ ಬೆಥನಿಯಾ ಚರ್ಚಿನ ಧರ್ಮಗುರುಗಳಾದ ರೆ.ಸೊಲೊಮನ್ ಅವರು ಮಾತನಾಡಿ “ಮಕ್ಕಳು ಶಿಕ್ಷಣದ ಜೊತೆ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸನ್ನಡೆತೆಯನ್ನು ರೂಢಿಸಿಕೊಳ್ಳಬೇಕು. ಸಂಸ್ಕಾರವನ್ನು ನೀಡಿ ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸುವುದು ಹಿರಿಯರ ಜವಾಬ್ದಾರಿ. ಮಕ್ಕಳನ್ನು ಶ್ರೇಷ್ಠ ವ್ಯಕ್ತಿಗಳಾಗಿ ರೂಪಿಸಿ ಸಮಾಜಕ್ಕೆ ಅರ್ಪಿಸುವ ಕಾರ್ಯದಲ್ಲಿ ಪೋಷಕರು ಮತ್ತು ಶಿಕ್ಷಕರು ಬದ್ಧತೆಯನ್ನು ಹೊಂದಿರಬೇಕು” ಎಂದು ಹೇಳಿದರು.
ಇನ್ನೋರ್ವ ಅತಿಥಿ ಕಾರ್ಕಳ ತಾಲೂಕು ಇಂಜಿನಿಯರುಗಳ ಸಂಘದ ಅಧ್ಯಕ್ಷರಾದ ವಿಜಯರಾಜ್ ಶೆಟ್ಟಿ ಅವರು ಮಾತನಾಡಿ “ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಈ ಕಾರ್ಯಕ್ರಮ ಅತ್ಯಪೂರ್ವವಾದುದು. ಇಂತಹ ಕಾರ್ಯಕ್ರಮಗಳು ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ” ಎಂದು ಹೇಳಿದರು.
ಕಾರ್ಕಳದ ಖ್ಯಾತ ಉದ್ಯಮಿ ಹಾಗೂ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ವಿವೇಕಾನಂದ ಶೆಣೈ ಅವರು ಮಾತನಾಡಿ “ಸದಭಿರುಚಿಯ ಹಾಗೂ ಪ್ರತಿಭೆಗಳ ಅನಾವರಣ ಮಾಡುವ ಇಂತಹ ಕಾರ್ಯಕ್ರಮ ನಡೆಸುತ್ತಿರುವ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಅದೃಷ್ಟಶಾಲಿಗಳು” ಎಂದು ಹೇಳಿದರು.
ಸತತ ಐದು ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ರಾಷ್ಟ್ರಮಟ್ಟದ ಚೆಸ್ ಆಟಗಾರ್ತಿ ಸಂಸ್ಥೆಯ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶಾನ್ವಿ ಎಸ್ ಬಲ್ಲಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ಧರು. ನಂತರ ಗಣ್ಯರು ಮಕ್ಕಳು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ, ಚಿತ್ರಕಲೆ ಹಾಗೂ ಕ್ರಾಫ್ಟ್, ಮಕ್ಕಳಿಂದಲೇ ನಡೆಸಲ್ಪಡುವ ಆಹಾರ ಮಳಿಗೆಗಳು, ಮನೋರಂಜನಾ ಆಟಗಳ ಮಳಿಗೆಗಳನ್ನು ಉದ್ಘಾಟಿಸಿದರು.
ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಆವೆಲಿನ್ ಲೂಯಿಸ್, ಸದಸ್ಯರಾದ ಡಾ.ಪೀಟರ್ ಫೆರ್ನಾಂಡಿಸ್, ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಪ್ ಕಿಶೋರ್ ಲೋಬೊ, ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಸಂಸ್ಥೆಯ ಆಪ್ತ ಸಮಾಲೋಚಕಿ ಸಿ.ಡಾ.ಶಾರ್ಲೆಟ್ ಸಿಕ್ವೇರಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರುಗಳಾದ ಪದವಿಪೂರ್ವ ವಿಭಾಗದ ರಾಜೇಶ್ ಕುಂದರ್, ಪ್ರೌಢಶಾಲಾ ವಿಭಾಗದ ಪ್ರಕಾಶ್ ಡಿ’ಸೋಜ, ಪ್ರಾಥಮಿಕ ವಿಭಾಗದ ಶ್ರೀಮತಿ ಲಿನೆಟ್ ಮರಿಯಾ ಡಿ’ಸೋಜ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿಗಳ ಪ್ರದರ್ಶನ, ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ, ವಿವಿಧ ತಿಂಡಿ ತಿನಿಸುಗಳು ಹಾಗೂ ಮನೋರಂಜನಾ ಆಟಗಳ ಸ್ಟಾಲ್, ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು ಮುಂತಾದವುಗಳು ನಡೆಯಿತು.
ಮಕ್ಕಳಿಂದ ವಿವಿದ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಸ್ವಾಗತಿಸಿ, ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಪಾವನಾ ಧನ್ಯರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.