ಹೆಬ್ರಿ :ಕಲಿಕೆಗೆ ಮಾಧ್ಯಮ ಮುಖ್ಯವಲ್ಲ. ಆಸಕ್ತಿ, ಅಭಿರುಚಿಯನ್ನು ಇಟ್ಟುಕೊಂಡು ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಅನೇಕ ಮಂದಿ ಉನ್ನತ ಉದ್ಯೋಗವನ್ನು ಗಿಟ್ಟಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಪಡೆದುಕೊಂಡದ್ದನ್ನು ನಮ್ಮೂರಿನಲ್ಲೇ ಕಾಣುತ್ತಿದ್ದೇವೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರ ಸದಾ ನೆರವನ್ನು ನೀಡುತ್ತಿದೆ. ಪೋಷಕರು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ಸದಾ ಗಮನವಹಿಸಿ ಉತ್ತಮ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಮುದ್ರಾಡಿ ಗುರುರಕ್ಷಾ ಸೌಹಾರ್ದ ಸಹಕಾರಿ ಸೊಸೈಟಿ ಅಧ್ಯಕ್ಷರು,ಹೆಬ್ರಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಂ. ಮಂಜುನಾಥ ಪೂಜಾರಿ ಹೇಳಿದರು.
ಅವರು ಮುದ್ರಾಡಿ ಬಲ್ಲಾಡಿ ತುಂಡುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮುದ್ರಾಡಿ ಪಂಚಾಯತ್ ನ ಹಿರಿಯ ಸದಸ್ಯರಾದ ಗಣಪತಿ ಎಂ. ಮಾತನಾಡಿ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. ಹಳೆ ವಿದ್ಯಾರ್ಥಿ ಸಂಘ, ಪೋಷಕರ ಬೆಂಬಲ, ದಾನಿಗಳ ಸಹಕಾರದಿಂದ ತುಂಡುಗುಡ್ಡೆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಕಲಿಕೆ, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಸಂತೋಷದ ವಿಚಾರ. ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆಗಳು ಉಳಿಸಿ, ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಮುದ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಮಂಜುನಾಥ್ ಹೆಗ್ಡೆ, ಪಂಚಾಯತ್ ಉಪಾಧ್ಯಕ್ಷೆ ರಮ್ಯಾಕಾಂತಿ, ಪಂಚಾಯತ್ ಸದಸ್ಯರಾದ ರತ್ನ ಪೂಜಾರಿ ಮತ್ತು ಶಾಂತಾ ದಿನೇಶ್ ಪೂಜಾರಿ, ಪಂಚಾಯತ್ ಮಾಜಿ ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಗುಣಕರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಪ್ರತಿನಿಧಿ ಸೂರಜ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಂಕರ ಕುಲಾಲ್, ಸಮಿತಿಯ ಗೌರವಾಧ್ಯಕ್ಷರಾದ ಮಧುಸೂದನ್ ಭಟ್, ಶಾಲೆಯ ಮುಖ್ಯ ಶಿಕ್ಷಕಿ ಚಿತ್ರಾ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುಮತಿ, ಶಾಲಾ ವಿದ್ಯಾರ್ಥಿ ನಾಯಕ ಶ್ರವಣ್ ಉಪಸ್ಥಿತರಿದ್ದರು.
ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಯಲ್ಲಿ ಸದಾ ತೊಡಗಿಸಿಕೊಂಡ ನಿವೃತ್ತ ಮುಖ್ಯ ಶಿಕ್ಷಕರಾದ ಗುಣಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷರಾದ ಮಧುಸೂದನ್ ಭಟ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಚಿತ್ರಾ ವಾರ್ಷಿಕ ವರದಿ ಮಂಡಿಸಿದರು. ಶಾಲೆಯ ಸಹಶಿಕ್ಷಕಿಯರಾದ ಪ್ರಮೀತಾ, ಬಾಬಿ ಮತ್ತು ಹಳೆ ವಿದ್ಯಾರ್ಥಿನಿ ದೀಕ್ಷಾ ಶೆಟ್ಟಿ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಹಳೆ ವಿದ್ಯಾರ್ಥಿನಿ ಅನುಪಮಾ ಶೆಟ್ಟಿ ವಂದಿಸಿದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಅನಂತರ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ನಡೆಯಿತು.ಶಿಕ್ಷಕ ರಕ್ಷಿತ್ ನಾಯ್ಕ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.