ಪಡುಮಾರ್ನಾಡು ಹಾಲು ಉತ್ಪಾದಕರ ಸಂಘಕ್ಕೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ದನ ಸಾಕದೆ ಡೈರಿಗೆ ಹಾಲು ಹಾಕುತ್ತಿರುವ ದಯಾನಂದ ಪೈ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವಿರೋಧ ಆಯ್ಕೆಗೆ ಮುಂಚೆ ನಿರ್ದೇಶಕರಿಗೆ ನೋಟೀಸು ನೀಡದೆ ಏಕನಿರ್ಧಾರದೊಂದಿಗೆ ಆಯ್ಕೆ ಮಾಡಲಾಗಿದೆ ಎಂದು ನಿರ್ದೇಶಕ ನಮಿರಾಜ್ ಬಲ್ಲಾಳ್ ಆರೋಪಿಸಿದ್ದಾರೆ. ಅವರು ಹಾಲಿನ ಡೈರಿಯ ಮುಂದೆಯೇ ಹಾಲು ಇಟ್ಟು ಇಂದು ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಿದ್ದಾರೆ.
ಪಡುಮಾರ್ನಾಡು ಹಾಲು ಉತ್ಪಾದಕರ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ದಯಾನಂದ ಪೈ ಮತ್ತು ನಮಿರಾಜ್ ಬಲ್ಲಾಳ್ ಸಹಿತ ಇತರರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಮುನ್ನ ಚುನಾವಣಾಧಿಕಾರಿಯವರು ನಿರ್ದೇಶಕರಿಗೆ ನೋಟೀಸು ನೀಡಬೇಕಾಗಿರುವುದು ಕ್ರಮ. ಆದರೆ ಚುನಾವಣಾಧಿಕಾರಿ ವಿಲಾಸ್ ಅವರು ಆ ಜವಾಬ್ದಾರಿಯನ್ನು ಕಾರ್ಯದರ್ಶಿ ಉಮಾನಾಥ ಅವರಿಗೆ ವಹಿಸಿಕೊಟ್ಟಿದ್ದರೆನ್ನಲಾಗಿದೆ. ಉಮಾನಾಥ ಅವರು ನಿರ್ದೇಶಕರಿಗೆ ಪ್ರಮಾಣಪತ್ರ ನೀಡಿ ಕಡತಕ್ಕೆ ಸಹಿ ತೆಗೆದುಕೊಂಡಿದ್ದಾರೆಯೇ ವಿನಹ ಚುನಾವಣೆಯ ಬಗ್ಗೆ ನೋಟೀಸನ್ನಾಗಲೀ, ಹೇಳಿಕೆಯನ್ನಾಗಲೀ ನೀಡಿಲ್ಲ ಎಂಬುದು ನಮಿರಾಜ್ ಅವರ ಆರೋಪ. ದಯಾನಂದ ಪೈ ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕಳೆದ ಹಲವು ವರ್ಷಗಳಿಂದ ದಯಾನಂದ ಪೈ ಅವರು ಅಧ್ಯಕ್ಷರಾಗುತ್ತಾ ಬಂದಿದ್ದಾರೆ, ಆದರೆ ಅವರು ಒಂದೇ ಒಂದು ದನ ಸಾಕುವುದಿಲ್ಲ, ಆದರೂ ಡೈರಿಗೆ ಹಾಲು ಹಾಕುತ್ತಾರೆ, ಆ ಹಾಲು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿರುವ ನಮಿರಾಜ್ ಅವರು ನಿರ್ದೇಶಕರಿಗೆ ನೋಟೀಸು ನೀಡದೆ ಚುನಾವಣೆ ನಡೆಸಿರುವ ಸಿಬ್ಬಂದಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ ಡೈರಿಯ ಮುಂದೆ ಧರಣಿ ಕೂತಿದ್ದಾರೆ.
ಸಂಬಂಧಪಟ್ಟ ಮೇಲಾಧಿಕಾರಿಗಳು ಬಂದು ಇತ್ಯರ್ಥಪಡಿಸುವವರೆಗೆ ತಾನು ಧರಣಿಯನ್ನು ಕೈ ಬಿಡುವುದಿಲ್ಲ ಎಂದಿದ್ದಾರೆ.