ವಿದ್ಯಾರ್ಥಿಗಳು ಸದಾ ಲವಲವಿಕೆಯಿಂದ ಕಲಿತು ಜ್ಞಾನ ಸಂಪಾದನೆ ಮಾಡಬೇಕು. ಹೆತ್ತವರ ಗುರುಗಳ ಹಾಗೂ ಹಿರಿಯರ ಮಾತುಗಳನ್ನು ಪಾಲಿಸಬೇಕು. ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು. ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಸದಾ ಜಾಗೃತವಾಗಿರಬೇಕು. ತಮಗೆ ಯಾವುದೇ ತೊಂದರೆಗಳಾದಾಗಲೂ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು. ಪೊಲೀಸರು ವಿದ್ಯಾರ್ಥಿ ಸ್ನೇಹಿಯಾಗಿ ಸದಾ ರಕ್ಷಣೆ ನೀಡುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಇಂದಿನ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಿತರಾಗಿ ತಾವು ಅನಗತ್ಯ ಸಂದೇಶಗಳನ್ನು ಕಳುಹಿಸುವುದು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು ಇಲ್ಲವೇ ತಮಗೆ ಬಂದ ಸಂದೇಶಗಳಿಂದ ತಾವೇ ಮೋಸ ಹೋಗುವುದು ಕಂಡು ಬರುತ್ತಿದೆ. ರೀತಿ ಆಗದಂತೆ ಎಚ್ಚರ ವಹಿಸಬೇಕು ಅಲ್ಲದೇ ಅನಗತ್ಯ ಚಟುವಟಿಕೆಗಳಲ್ಲಿ ತಾವು ತೊಡಗಿಕೊಳ್ಳಬಾರದು.
ವಿದ್ಯಾರ್ಥಿಗಳು ತಮಗೆ ಯಾವುದೇ ಮಾನಸಿಕ ದೈಹಿಕ ಹಲ್ಲೆಗಳಾಗುತ್ತಿದ್ದರೆ ಕೂಡಲೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು. ಅದರಲ್ಲೂ ಹೆಣ್ಣು. ಮಕ್ಕಳು ತಮಗೆ ಏನಾದರೂ ತೊಂದರೆಗಳಾದಾಗ ತಿಳಿಸಬೇಕು. ಪೊಲೀಸ್ ಇಲಾಖೆ ತಮಗೆ ಸದಾ ರಕ್ಷಣೆ ಮತ್ತು ಸಹಕಾರ ನೀಡುವುದು. ಪೊಲೀಸ್ ಠಾಣೆ ದೂರುದಾರರಿಗೆ ತೆರೆದ ಮನೆಯಂತೆ ದಿನದ ಇಪ್ಪತ್ತನಾಲ್ಕು ಗಂಟೆ ನಿಮ್ಮ ರಕ್ಷಣೆಗೆ ಸದಾ ಬಾಗಿಲು ತೆರೆದೇ ಇರುತ್ತದೆ ಎಂದು ಸಂತೋಷ್ ಕಾರ್ಕಳ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಚೇರಿ ಉಡುಪಿ ಇವರು ಹೇಳಿದರು.
ಅವರು ಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಜರುಗಿದ ಕಾನೂನು ಅರಿವು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಅದರ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯ ಕಾರ್ಯತತ್ಪರತೆಯ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ಸಂದೇಹಗಳನ್ನು ಪ್ರಶ್ನೆ ರೂಪದಲ್ಲಿ ಕೇಳಿ ಮಾಹಿತಿ ತಿಳಿದುಕೊಂಡರು. ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯು ವಿದ್ಯಾರ್ಥಿ ಸ್ನೇಹಿಯಾಗಿ ಹೇಗೆ ಸಹಕರಿಸುವುದು ಎಂದು ಸವಿವರವಾಗಿ ತಿಳಿಸಿದರು. ವಿದ್ಯಾರ್ಥಿಗಳು ಬಹಳ ತದೇಕ ಚಿತ್ತದಿಂದ ಕೇಳಿ ತಿಳಿದುಕೊಂಡರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಆರ್ ನಾರಾಯಣ ಶೆಣೈ ಉಪಸ್ಥಿತರಿದ್ದು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸಂಪನ್ಮೂಲ ವ್ಯಕ್ತಿ ಸಂತೋಷ್ ಕಾರ್ಕಳ.ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.