ಹೆಬ್ರಿ :ತುಳುನಾಡಿನ ಮಣ್ಣಿಗೆ ವಿಶೇಷ ಶಕ್ತಿ ಇದೆ. ನಮ್ಮ ನಾಡಿನ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ನಾಗಾರಾಧನೆ, ದೈವರಾಧನೆ ಸಹಿತ ನಮ್ಮ ಪೂರ್ವಿಕರು ಆಚರಿಸಿಕೊಂಡು ಬಂದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ತನ್ನದೇ ಆದ ಹಿನ್ನಲೆ ಇದೆ. ನಮ್ಮ ಪರಿಸರದ ಸಂರಕ್ಷಣೆಯ ಜೊತೆಗೆ ಹಿಂದೂ ಧರ್ಮದ ಉನ್ನತಿಗೆ ಶ್ರಮಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ. ಜಾತಿ, ಮತ, ಭೇದ ವಿಲ್ಲದೆ ಎಲ್ಲರಿಗೂ ಸಮಾನತೆಯ ತತ್ವಾದರ್ಶಗಳನ್ನು ಬೋಧಿಸಿದ ನಾರಾಯಣಗುರುಗಳ ಸಿದ್ಧಾಂತವನ್ನು ಅರಿತುಕೊಂಡು ಎಲ್ಲ ಸಂಘಟನೆಗಳು ಒಗ್ಗೂಡಿ ಶನಿದೇವರ ಆರಾಧನೆಯನ್ನು ಮಾಡುವ ಮೂಲಕ ನಮ್ಮ ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನೀಯವಾದುದು ಎಂದು ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಎಣ್ಣೆಹೊಳೆ ಹೇಳಿದರು.
ಅವರು ಮುನಿಯಾಲು ಮಾತಿಬೆಟ್ಟಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಗುರುನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಲೋಕಕಲ್ಯಾಣಾರ್ಥವಾಗಿ ನಡೆದ ಸಾರ್ವಜನಿಕ ಶ್ರೀ ಶನಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧಾರ್ಮಿಕ ಉಪನ್ಯಾಸ ನೀಡಿದರು.
ಮುನಿಯಾಲು ಬಂಟರ ಸಂಘದ ಅಧ್ಯಕ್ಷರಾದ ಸತೀಶ್ ಶೆಟ್ಟಿ ಮುಟ್ಲುಪಾಡಿ ಮಾತನಾಡಿ ಶುಭ ಹಾರೈಸಿದರು.
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಮಂಜುನಾಥ್ ಟಿ. ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಗುರುನಾರಾಯಣ ಸೇವಾ ಸಂಘದ ಗೌರವಾಧ್ಯಕ್ಷರಾದ ಎಸ್. ಟಿ. ಕುಂದರ್, ಉದ್ಯಮಿ ವರಂಗ ಸಂತೋಷ್ ಪೂಜಾರಿ ಜಾರಣಿಗೆ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಹಿಂದೂ ಹೆಲ್ಪ್ ಲೈನ್ ಮುನಿಯಾಲು ಗೌರವಾಧ್ಯಕ್ಷರಾದ ಡಾ. ಸುದರ್ಶನ್ ಹೆಬ್ಬಾರ್, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಅಮೀನ್, ಮಾತಿಬೆಟ್ಟು ಸಂಪಿಗೆಬಾಕ್ಯಾರು ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಮೊಕ್ತೇಸರರಾದ ಶಾಂತಿರಾಜ್ ಜೈನ್, ನಾರಾಯಣಗುರು ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾದ ಆನಂದ ಪೂಜಾರಿ ಉಪಸ್ಥಿತರಿದ್ದರು.
ಗುರುನಾರಾಯಣ ಸೇವಾ ಸಂಘದ ಕಾರ್ಯದರ್ಶಿ ರತ್ನಾಕರ ಪೂಜಾರಿ ಪೆರ್ಮಾನ್ ಮಾತಿಬೆಟ್ಟು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಗುರುನಾರಾಯಣ ಸೇವಾ ಸಂಘದ ಉಪಾಧ್ಯಕ್ಷರಾದ ಹರೀಶ್ ಪೂಜಾರಿ ವಂದಿಸಿದರು. ಶ್ರೀಕಾಂತ್ ಭಟ್ ಅಜೆಕಾರು ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಆನಂತರ ಸ್ಥಳೀಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಡ್ರಾಮಾ ಜೂನಿಯರ್ ರನ್ನರ್, ಡಾನ್ಸ್ ಕರ್ನಾಟಕ ಡಾನ್ಸ್ ಫೈನಲಿಸ್ಟ್ ಕುಮಾರಿ ಸಾನಿಧ್ಯ ಆಚಾರ್ಯ ಪೆರ್ಡೂರು ಅವರಿಂದ ನೃತ್ಯ ಕಾರ್ಯಕ್ರಮ, ರಾಷ್ಟ್ರ ಮಟ್ಟದ ಯೋಗಪಟು ಕುಮಾರಿ ಅನ್ವಿ ಹೆಚ್. ಅಂಚನ್ ಅವರಿಂದ ಯೋಗನೃತ್ಯ, ಯಕ್ಷ ಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್ ಅವರ ಗಾನ ಸಾರಥ್ಯದಲ್ಲಿ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಸಹಕರಿಸಿದರು.