*ಚೊಚ್ಚಲ ಶಾಸಕರಾದ ಪುತ್ತೂರು ಅಶೋಕ್ ರೈ ಅವರಿಂದ 4 ಅವಧಿಯ ಕಾರ್ಕಳ ಶಾಸಕ ಸುನೀಲ್ ಕುಮಾರ್ ಟ್ಯೂಷನ್ ಪಡೆಯಲಿ: ಉದಯ ಶೆಟ್ಟಿ ಮುನಿಯಾಲು*
ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರು ತಾನು ಮಂಡಿಸಿದ ಐತಿಹಾಸಿಕ 16ನೇ ಬಜೆಟಿನಲ್ಲಿ ಮಂಗಳೂರು ಜಿಲ್ಲೆಯ ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜಿನ ಘೋಷಣೆಯನ್ನು ಮಾಡಿದ್ದಾರೆ. ಪುತ್ತೂರಿಗೆ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಸುವಲ್ಲಿ ಭಗೀರಥ ಪ್ರಯತ್ನವನ್ನು ಮಾಡಿ ಯಶಸ್ವಿಯಾದ ಪುತ್ತೂರು ಮೆಡಿಕಲ್ ಕಾಲೇಜಿನ ರೂವಾರಿಗಳು ಛಲ ಬಿಡದ ತ್ರಿವಿಕ್ರಮ ಪುತ್ತೂರು ಶಾಸಕರಾದ ಅಶೋಕ್ ರೈ ಕೊಡಿಂಬಾಡಿ ಅವರಿಗೆ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ .
ಚೊಚ್ಚಲ ಶಾಸಕನಾಗಿ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಸುವ ಮುಖಾಂತರ ಕ್ಷೇತ್ರದ ಜನರಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಹಾಗೂ ಒಬ್ಬ ಆದರ್ಶ ಶಾಸಕ ಹೇಗಿರಬೇಕು ಎನ್ನುವುದನ್ನು ಅಶೋಕ್ ರೈ ತೋರಿಸಿಕೊಟ್ಟಿದ್ದಾರೆ. ಜನರಿಗಾಗಿ ಕೆಲಸ ಮಾಡಬೇಕು ಎನ್ನುವ ಇಚ್ಛಾಶಕ್ತಿ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಉದಾಹರಣೆ, ಶಾಸಕನಾದ ಅಲ್ಪಾವಧಿಯಲ್ಲಿ ತಾನು ಪ್ರತಿನಿಧಿಸುವ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜನ್ನು ಮಂಜೂರು ಗೊಳಿಸಿದ ಅಶೋಕ್ ರೈ ಅವರಿಂದ 4 ಅವಧಿಗೆ ಕಾರ್ಕಳದ ಶಾಸಕರಾಗಿ ಒಂದು ಬಾರಿ ಮಂತ್ರಿಯೂ ಆಗಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಕಲಿಯುವುದು ಬಹಳಷ್ಟಿದೆ ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ತಮ್ಮ ಹೇಳಿಕೆಯಲ್ಲಿ ತಿಳಿದ್ದಾರೆ.
ಸುನಿಲ್ ಕುಮಾರ್ ಅವರು ಕಾರ್ಕಳ ಕ್ಷೇತ್ರದಿಂದ 4 ಬಾರಿ ಗೆದ್ದು ಶಾಸಕರಾಗಿ ಒಂದು ಬಾರಿ ಸಚಿವರಾಗಿ ಅಧಿಕಾರ ಪಡೆದರೂ ಕಾರ್ಕಳ ಕ್ಷೇತ್ರಕ್ಕೆ ಸುನೀಲ್ ಕುಮಾರ್ ಕೊಡುಗೆ ಶೂನ್ಯವಾಗಿದೆ.
ಕಾರ್ಕಳ ಕ್ಷೇತ್ರದ ಯುವಜನತೆಯ ಶಿಕ್ಷಣದ ದೃಷ್ಟಿಯಿಂದ ಸರ್ಕಾರಿ ತಾಂತ್ರಿಕ ಕಾಲೇಜು, ಉದ್ಯೋಗಕ್ಕಾಗಿ ಮಹಾನಗರಗಳಿಗೆ ವಲಸೆ ಹೋಗಬೇಕಾದ ಅನಿವಾರ್ಯತೆಯಲ್ಲಿರುವ ಯುವಜನರಿಗೆ ಕಾರ್ಕಳದಲ್ಲಿಯೇ ಉದ್ಯೋಗ ಸೃಷ್ಟಿಯಾಗುವ ನಿಟ್ಟಿನಲ್ಲಿ ಕೈಗಾರಿಕಾ ಯೋಜನೆಗಳನ್ನು ಕಾರ್ಕಳಕ್ಕೆ ತರುವಲ್ಲಿ ಸುನಿಲ್ ಕುಮಾರ್ ಕೆಲಸವನ್ನು ಮಾಡದೆ ಕೇವಲ ಸ್ವಂತ ಪ್ರಚಾರಕ್ಕಾಗಿ ಹಾಗೂ ತನ್ನ ಬೆಂಬಲಿಗ ಪಡೆಯನ್ನು ಖುಷಿ ಪಡಿಸಲು ಮಾತ್ರಾ ಶಾಸಕರಾದಂತಿದೆ.
ಸುನಿಲ್ ಕುಮಾರ್ ಶಾಸಕರಾದ ಬಳಿಕ ಕಾರ್ಕಳಕ್ಕೆ ಗುರುತರವಾದಂತಹ ಯಾವುದೇ ಸರ್ಕಾರಿ ಯೋಜನೆಗಳನ್ನು ತರುವಲ್ಲಿ ವಿಫಲವಾಗಿದ್ದಾರೆ ಎಂದು ಉದಯ ಶೆಟ್ಟಿ ಮುನಿಯಾಲು ಟೀಕಿಸಿದ್ದಾರೆ, ಕೇವಲ ಸ್ವಂತ ಅಭಿವೃದ್ಧಿಯ ಬಗ್ಗೆ ಮಾತ್ರಾ ಯೋಚಿಸುವ ಸುನಿಲ್ ಕುಮಾರ್ ಅಲ್ಪಾವಧಿಯಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಳಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಟ್ಯೂಷನ್ ಪಡೆಯಲಿ ಎಂದು ಉದಯ ಶೆಟ್ಟಿ ಮುನಿಯಾಲು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
previous post
next post