ಕಡಂದಲೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ) ಕಡಂದಲೆ-ಪಾಲಡ್ಕ ಹಾಗೂ ಮಹಿಳಾ ಘಟಕದ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಾ. 9ರಂದು ಬಿಲ್ಲವ ಸಂಘ, ಕಡಂದಲೆ-ಪಾಲಡ್ಕದಲ್ಲಿ ಸಾಧಕ ಮಹಿಳೆಯರಿಗೆ ಸನ್ಮಾನ ಮತ್ತು ಮಾಹಿತಿ ಕಾರ್ಯಕ್ರಮ “ಸಮರ್ಪಣೆ-2025” ಜರಗಿತು.
ಕಾರ್ಯಕ್ರಮವನ್ನು ಕಡಂದಲೆ ಅನ್ನಪೂರ್ಣದ ಶ್ರೀಮತಿ ಪ್ರಶಾಂತಿ ಶೇಖರ ಅಂಚನ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಮಾತನಾಡುತ್ತಾ ಮಹಿಳೆಯರ ಸಾಧನೆಯನ್ನು ಗುರುತಿಸಿ ಸನ್ಮಾನಿಸುವುದು ಇಡೀ ಸಮಾಜಕ್ಕೆ ಲಾಭದಾಯಕವಾಗಿದ್ದು ಎಲ್ಲವನ್ನೂ ಅರಿತುಕೊಂಡು, ಕಾನೂನಿನ ಅರಿವನ್ನು ಬೆಳೆಸಿಕೊಂಡು ಸಬಲರಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ಶ್ರೀಮತಿ ಶೋಭಾ ಸುರೇಶ್ ಅವರು ಮಹಿಳೆಯರಲ್ಲಿ ಸಂಸ್ಕಾರ-ಸಂಸ್ಕೃತಿಯ ಬಗ್ಗೆ ಹಾಗೂ ಮೂಡುಬಿದಿರೆಯ ವಕೀಲರು ಶ್ರೀಮತಿ ಮೇಘರಾಣಿ ಅವರು ಕಾನೂನು ಮಾಹಿತಿ ನೀಡಿದರು.
ಕಡಂದಲೆ ಪಾಲಡ್ಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಲೀಲಾಧರ, ಯುವವಾಹಿನಿ (ರಿ.) ಕೇಂದ್ರ ಸಮಿತಿ ಸಾಂಸ್ಕೃತಿಕ ನಿರ್ದೇಶಕ ಸುಶಾಂತ್ ಕರ್ಕೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಮಹಿಳಾ ನಿರ್ದೇಶಕಿಯರಾದ ಶೋಭಾ ದಿನೇಶ್, ಪಾವನ ಸಂತೋಷ್ ಸಾಲ್ಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಅನಿತಾ ಮುಂಡ್ರೊಟ್ಟು, ಶೋಭಾ ಬೆಳುವಾಯಿ, ಸುಜಾತಾ, ಶಾರದಾ, ಕಸ್ತೂರಿ, ಪವಿತ್ರ, ಪದ್ಮಾವತಿ ಮತ್ತು ಕವಿತಾ ಹಾಗೂ ಪಾಲಡ್ಕ ಗ್ರಾ.ಪಂ. ಘನತ್ಯಾಜ್ಯ ನಿರ್ವಹಣಾ ವಾಹನದ ಚಾಲಕಿ ಭಾರತಿ ಮತ್ತು ಸಹಾಯಕಿ ವಿಮಲಾ ಅವರನ್ನು ಸನ್ಮಾನಿಸಲಾಯಿತು.
ಕಡಂದಲೆ-ಪಾಲಡ್ಕ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಗಣೇಶ್ ಸ್ವಾಗತಿಸಿದರು. ರಶ್ಮಿ ರಾಜೇಶ್ ಪ್ರಾರ್ಥಿಸಿದರು. ಜಾನಕಿ ವಸಂತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಆಕ್ಷತಾ ಮಾರೂರು ವಂದಿಸಿದರು.