ಹೆಬ್ರಿ: ಹೆತ್ತವರ ಹಿಂದಿನ ಕಷ್ಟದ ಹಾದಿಯ ಪ್ರಯಾಣದ ಅರಿವು ಮಕ್ಕಳಿಗಿದ್ದಾಗ ಅವರು ಹಾದಿ ತಪ್ಪದ, ಸಮಾಜದ ಹಿತ ಬಯಸುವ ಯೋಗ್ಯ, ಉತ್ತಮ ನಾಗರೀಕರಾಗಿ ಬದಕು ಸಾಗಿಸಲು ಸಾಧ್ಯವಾಗುತ್ತದೆ. ಪೋಷಕರು ಕೂಡ ತಮ್ಮ ಒತ್ತಡದ ಜೀವನದ ಜಂಜಾಟಗಳಲ್ಲಿ ಕಳೆದು ಹೋಗದೆ, ತಮ್ಮ ಮಕ್ಕಳೊಂದಿಗೆ ಕನಿಷ್ಠ ಅರ್ಧ ಗಂಟೆಯಾದರೂ ಕುಳಿತು ಮಾತನಾಡಬೇಕು. ಆ ಮೂಲಕ ಅವರಿಗೂ ತಮ್ಮ ಭಾವನೆಗಳನ್ನು, ಯೋಚನೆಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಸಹಾಯಕವಾಗುತ್ತದೆ. ಪ್ರತಿಯೊಂದು ಮಗುವು ಭಿನ್ನ. ಮಕ್ಕಳ ಸಾಮರ್ಥ್ಯಕ್ಕನುಗುಣವಾದ ಶಿಕ್ಷಣ ದೊರಕಬೇಕು. ಸಾಧಕರ ಕಥೆಗಳನ್ನು ತಿಳಿದುಕೊಳ್ಳಿ. ಅವರ ಪರಿಶ್ರಮದ ಹಾದಿಯೇ ನಿಮ್ಮ ಬದುಕಿಗೆ ಪ್ರೇರಣೆಯಾಗುತ್ತದೆ. ಓದುವ ಪ್ರವೃತ್ತಿ ನಿರಂತರವಾಗಿರಲಿ. ವಿದ್ಯಾರ್ಥಿಗಳು ಅಧ್ಯಾಪಕರು ನಿಮಗೆ ನೀಡುವ ಅವಕಾಶಗಳನ್ನು ಯಾವತ್ತೂ ಕಳೆದುಕೊಳ್ಳಬೇಡಿ ಎಂದು ಕಾರ್ಕಳ ಎಸ್ ವಿಟಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಹೇಳಿದರು.

ಅವರು ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ ರಿಜಿಸ್ಟರ್ ನ ಆಡಳಿತಕ್ಕೊಳಪಟ್ಟ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದಿಕ್ಸೂಚಿ ಉಪನ್ಯಾಸಕಾರರಾಗಿ ಪಾಲ್ಗೊಂಡು ಮಾತನಾಡಿದರು.

ಮುದ್ರಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ವಸಂತಿ ಪೂಜಾರಿ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರು, “ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ದೊಡ್ಡದು. ಅವರು ಕಲಿಸಿದ ಸಂಸ್ಕಾರದಿಂದಲೇ ಭವ್ಯ ಭವಿಷ್ಯ ರೂಪಿತವಾಗುವುದು. ಸಂಸ್ಕಾರದ ಜೊತೆಗೆ ಶಿಕ್ಷಣವು ಮೇಳೈಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿರಿ. ತಂದೆ-ತಾಯಿ, ಗುರು-ಹಿರಿಯರು, ಊರಿನ ಋಣ ತೀರಿಸಲು ಎಂದೂ ಸಾಧ್ಯವಿಲ್ಲ. ಈ ಋಣ ಪರಭಾರೆಯೂ ಅಸಾಧ್ಯ. ಆದ ಕಾರಣ ಯಥಾ ಶಕ್ತಿ ದಾನ-ಧರ್ಮ ಕಾರ್ಯಗಳು ರೂಢಿಯಾಗಲಿ ಎಂದರು.

ಕಾರ್ಯಕ್ರಮದ ಪ್ರಧಾನ ಪೋಷಕರಾದ ಹಳೆ ವಿದ್ಯಾರ್ಥಿನಿ ಪರಿಣಿತ ಶೆಟ್ಟಿಯವರು ಮಾತನಾಡಿ, “ನಾನು ಕಲಿತ ಶಾಲೆಗೆ ನನ್ನ ಕಿಂಚಿತ್ ಕಾಣಿಕೆ ಇದು. ನನ್ನ ಭವಿತವ್ಯಕ್ಕೆ ಕಾರಣೀಭೂತವಾದ ಈ ಸಂಸ್ಥೆ, ನನಗೆ ಕಲಿಸಿದ ಇಲ್ಲಿಯ ಶಿಕ್ಷಕ ವೃಂದ ಆದರ್ಶಪ್ರಾಯರು. ಸಮಾಜದ, ಶಾಲೆಯ ಋಣ ತೀರಿಸುವ ಚಿಕ್ಕ ಅವಕಾಶ ಸಿಕ್ಕಿರುವುದು ಮತ್ತು ಇಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿರುವುದು ತುಂಬಾ ಖುಷಿ ನೀಡಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ರಿಜಿಸ್ಟರ್ ನ ಕಾರ್ಯದರ್ಶಿ ಮುದ್ರಾಡಿ ಅಶೋಕ್ ಕುಮಾರ್ ಶೆಟ್ಟಿಯವರು ಮಾತನಾಡಿ “ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ನಮ್ಮ ಸಂಸ್ಥೆ ಸಮಾನ ಅವಕಾಶ ನೀಡುತ್ತಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ. ಅಂಕಗಳ ಕ್ಷೇತ್ರದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ – ರಾಷ್ಟ್ರಮಟ್ಟದವರೆಗೂ ಏರಿ ಬಂದವರಿದ್ದಾರೆ. ನೀವು ಇಷ್ಟಪಡುವ ಕ್ಷೇತ್ರದಲ್ಲಿ ತೊಡಗಿ ಶಕ್ತಿಮೀರಿ ಪ್ರಯತ್ನಿಸಿ ಸಾಧಕರಾಗಿರಿ ಎಂದರು.

ಪಂಚಾಯತ್ ಉಪಾಧ್ಯಕ್ಷೆ ರಮ್ಯಕಾಂತಿ, ಹಿರಿಯ ಪಂಚಾಯತ್ ಸದಸ್ಯರಾದ ಗಣಪತಿ ಎಂ., ಪಂಚಾಯತ್ ಸದಸ್ಯರಾದ ಸನತ್ ಕುಮಾರ್, ನಿವೃತ್ತ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ ಶುಭ ಹಾರೈಸಿದರು.
ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ತ್ರಿಶಾ ಕಾಲೇಜು ಕಟಪಾಡಿಯ ಪ್ರಾಂಶುಪಾಲರಾದ ಹರಿಪ್ರಸಾದ್ ಹೆಬ್ಬಾರ್ ಮಕ್ಕಳ ಲೋಕ ಹಸ್ತಪತ್ರಿಕೆ ಬಿಡುಗಡೆಗೊಳಿಸಿದರು.
ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷೆ ಪ್ರತಿಮಾ ಉಪ್ಪಳ, ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಅಶೋಕ್ ಪೂಜಾರಿ ಸಾಂತ್ರಪಲ್ಕೆ ಅನಿಸಿಕೆ ವ್ಯಕ್ತಪಡಿಸಿದರು. ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ ಕರ್ನಾಟಕ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ “ವಿವೇಕ ವಿದ್ಯಾರ್ಥಿ-೨೦೨೫” ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ ಪಡೆದ 8ನೇ ತರಗತಿಯ ವಂಶಿಕಾ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ 14ರ ಒಳಗಿನ ವಯೋಮಾನದ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ನಡೆಸಿದ ಕ್ರೀಡಾಕೂಟದಲ್ಲಿ ಈಟಿ ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಗುಂಡು ಎಸೆತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ 8ನೇ ತರಗತಿಯ ಸಾತ್ವಿಕ್ ಕುಲಾಲ್‌ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಪ್ರೇರೇಪಿಸಿ 15000 / – ರೂಗಳ ಬಹುಮಾನ ಘೋಷಿಸಿದ ಹಳೆ ವಿದ್ಯಾರ್ಥಿ ಮಂಜುನಾಥ ಭಕ್ರೆ, ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿದ ಈಶ್ವರನಗರದ ಕೊಡುಗೈ ದಾನಿ ಪದ್ಮಾವತಿ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು.
ಸಾಂಸ್ಕೃತಿಕ ಮತ್ತು ಕಲಿಕೆ ಹಾಗೂ ಕ್ರೀಡಾಕೂಟ ಮತ್ತು ಪೋಷಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಾಮಾಯಣ, ಮಹಾಭಾರತ ಪರೀಕ್ಷೆ, ವಿವೇಕ ವಿದ್ಯಾರ್ಥಿ ಪರೀಕ್ಷೆ ಹಾಗೂ ಶಾಂತಿವನ ಟ್ರಸ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಕಾರ್ತಿಕ್, ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಎಸ್. ಟಿ. ಶೆಟ್ಟಿಗಾರ್, ಮುದ್ರಾಡಿಯ ನಿವೃತ್ತ ಶಿಕ್ಷಕ ಗಣಪತಿ ಪೈ, ದಾನಿ ಪರಿಣಿತ ಶೆಟ್ಟಿಯ ಕುಟುಂಬಸ್ಥರಾದ ಪ್ರಸನ್ನ ಶೆಟ್ಟಿ, ಪುರಂದರ ಶೆಟ್ಟಿ, ಶ್ರೀಜಯ್, ಪಂಚಾಯತ್‌ನ ಮಾಜಿ ಅಧ್ಯಕ್ಷೆ ಶಶಿಕಲಾ ಡಿ ಪೂಜಾರಿ, ಗುರುಪ್ರಸಾದ್ ಹೆಗ್ಡೆ ಕೊಳಂಬೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಭಾಷ್ ಖಾರ್ವಿ, ಸ್ಥಳೀಯ ಶಿಕ್ಷಣ ಸಂಸ್ಥೆಗಳ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಊರವರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಶ್ಯಾಮಲಾ, ಚಂದ್ರಕಾಂತಿ ಹೆಗ್ಡೆ, ರಘುಪತಿ ಹೆಬ್ಬಾರ್ ಮತ್ತು ಶಿಕ್ಷಕೇತರ ಸಿಬ್ಬಂದಿ ಮಹೇಶ ಎಂ. ವಿಜೇತರ ಪಟ್ಟಿ ವಾಚಿಸಿದರು. ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕ ಪಿ.ವಿ.ಆನಂದ ಕಾರ್ಯಕ್ರಮ ನಿರೂಪಿಸಿ, ಹಿರಿಯ ಸಹ ಶಿಕ್ಷಕ ಮಹೇಶ್ ನಾಯ್ಕ್ ಕೆ. ವಂದಿಸಿದರು.
ಅನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
