ಮೂಡುಬಿದಿರೆ ಸಮೀಪದ ಮಿಜಾರು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಟದ ಮೈದಾನದಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿರುವ ಶಾಲಾ ಆಡಳಿತ ಮಂಡಳಿಯ ನಿರ್ಧಾರವನ್ನು ತೋಡಾರು, ಬಡಗಮಿಜಾರು ಮತ್ತು ತೆಂಕಮಿಜಾರು ಗ್ರಾಮಸ್ಥರು ಆಕ್ಷೇಪಿಸಿದ್ದಾರೆ.

ಮೂಡುಬಿದಿರೆ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಡಿ.ಎ ಉಸ್ಮಾನ್ ಶಾಲೆಯಲ್ಲಿ ಈಗಾಗಲೆ ಮಂಜೂರಾಗಿರುವ ನಾಲ್ಕು ಹೊಸ ಕೊಠಡಿಗಳನ್ನು ಮೈದಾನದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಆದರೆ, ಇದರಿಂದ ದಶಕಗಳ ಇತಿಹಾಸವಿರುವ ಕ್ರೀಡಾಂಗಣದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸುಮಾರು 85 ವರ್ಷಗಳ ಹಿಂದೆ 2.95 ಎಕರೆ ಜಾಗವನ್ನು ಆಟದ ಮೈದಾನಕ್ಕೆಂದೇ ಕಾಯ್ದಿರಿಸಲಾಗಿತ್ತು. ಅದರಲ್ಲಿ ಈಗಾಗಲೇ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಕಟ್ಟಡಗಳಿಗಾಗಿ 95 ಸೆಂಟ್ಸ್ ಬಿಟ್ಟುಕೊಡಲಾಗಿದ್ದು, ಸದ್ಯ ಕೇವಲ 2 ಎಕರೆ ಮಾತ್ರ ಉಳಿದಿದೆ. ಈಗ ಇದನ್ನೂ ಕಟ್ಟಡ ನಿರ್ಮಾಣಕ್ಕೆ ಬಳಸಿದರೆ ವಿದ್ಯಾರ್ಥಿಗಳಿಗೆ ಆಟೋಟಗಳಿಗೆ ಜಾಗವೇ ಇಲ್ಲದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಶಾಲೆಯಲ್ಲಿ ಈಗ ಇರುವ ಕೊಠಡಿಗಳನ್ನು ತೆರವುಗೊಳಿಸಿ ಅಲ್ಲಿಯೇ ಹೊಸ ಕಟ್ಟಡ ನಿರ್ಮಿಸಲಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರು (DDPI), ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ಪೋಷಕರು ಮನವಿ ಸಲ್ಲಿಸಿ, ಮೈದಾನವನ್ನು ಅದರ ಮೂಲ ರೂಪದಲ್ಲಿ ಉಳಿಸಿಕೊಡುವಂತೆ ಆಗ್ರಹಿಸಿದ್ದಾರೆ.
ತೆಂಕಮಿಜಾರು ಗ್ರಾ.ಪಂ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ತಾ.ಪಂ ಮಾಜಿ ಸದಸ್ಯ ಎಂ.ಜಿ ಮಹಮ್ಮದ್ , ಗ್ರಾ.ಪಂ ಸದಸ್ಯ ಎಂ.ಎ ರಝಾಕ್ , ಎಂ.ಎ ಅಶ್ರಪ್, ಗ್ರಾಮಸ್ಥರಾದ ನವದೀಪ್ ಶೆಟ್ಟಿ, ಝುಬೇರ್, ಅಫೀಝ್ ಸುದ್ದಿಗೋಷ್ಠಿಯಲ್ಲಿದ್ದರು.
