ಕಾರ್ಕಳ

ಕ್ರಿಯೇಟಿವ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲೋಕಾರ್ಪಣೆ: ಸಾಧಕರಿಗೆ ಸನ್ಮಾನ

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಸಂಸ್ಥೆಯು ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಅನೇಕ ಕಾರ್ಯ ಚಟುವಟಿಕೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಸಂಸ್ಥೆಯು ಇದೀಗ ಸಹಕಾರ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡು ಹೊಸ ಮೈಲುಗಲ್ಲೊಂದನ್ನು ನಿರ್ಮಿಸಿದೆ. ಸಪ್ತ ಸಂಸ್ಥಾಪಕರ ಕನಸಿನ ಕೂಸಾದ ಕ್ರಿಯೇಟಿವ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ. ಕಾರ್ಕಳದ ಕುಕ್ಕುದಕಟ್ಟೆ ಸರ್ಕಲ್‌ನಲ್ಲಿರುವ ಪಿಂಟೋ ಟವರ್ಸ್ ನ ಮೊದಲ ಮಹಡಿಯಲ್ಲಿ ವಿದ್ಯುಕ್ತವಾಗಿ ಲೋಕಾರ್ಪಣೆಗೊಂಡಿತು.

ಕ್ರಿಯೇಟಿವ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ ಲೋಕಾರ್ಪಣೆ ನಿಮಿತ್ತ ಸಭಾ ಕಾರ್ಯಕ್ರಮ ಕ್ರಿಯೇಟಿವ್ ಕಾಲೇಜಿನ ಸಪ್ತ ಸ್ವರ ವೇದಿಕೆಯಲ್ಲಿ ಜರುಗಿತು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್ ರವರು ಸೊಸೈಟಿಯನ್ನು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ, ಕ್ರಿಯೇಟಿವ್ ಸಂಸ್ಥೆಯು ಕೇವಲ ಕ್ಯಾಂಪಸ್ ನ ಒಳಗಡೆ ತನ್ನ ಕಾರ್ಯ ಚಟುವಟಿಕೆಗಳನ್ನು ಸೀಮಿತಗೊಳಿಸದೆ ಕ್ಯಾಂಪಸ್ ನ ಹೊರಗಡೆ ಅಂದರೆ ಹತ್ತಾರು ಮಂದಿಗೆ ಧ್ವನಿಯಾಗಬಲ್ಲ ಅನೇಕ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಯೋಜಿಸಿರುವುದು ಅತ್ಯಂತ ಶ್ಲಾಘನೀಯ. ಅದರ ಒಂದು ಕಾರ್ಯವೇ ಈ ಸೊಸೈಟಿಯ ಪರಿಕಲ್ಪನೆಯಾಗಿದೆ. ಈ ಸೊಸೈಟಿಯಿಂದಾಗಿ ಊರಿನ ಅನೇಕ ಜನರಿಗೆ ಒಳಿತಾಗಲಿ, ಸಾಲ ಸೌಲಭ್ಯಗಳು ಸಿಗುವಂತಾಗಲಿ ಕಾರ್ಕಳ ತಾಲೂಕಿಗೆ ಇದೊಂದು ದೊಡ್ಡ ಹಿರಿಮೆ ಎಂದು ಉದ್ಘಾಟನಾ ಭಾಷಣವನ್ನು ಮಾಡುತ್ತಾ ಶುಭ ಹಾರೈಸಿದರು.

ಕ್ರಿಯೇಟಿವ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರು ಹಾಗೂ ಕ್ರಿಯೇಟಿವ್ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕ್ರಿಯೇಟಿವ್ ಸಂಸ್ಥೆ ಕೇವಲ ಶೈಕ್ಷಣಿಕ ದೃಷ್ಟಿಕೋನವನ್ನಿಟ್ಟುಕೊಂಡು ಕಾರ್ಯನಿರ್ವಹಿಸದೆ ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ಶೈಕ್ಷಣಿಕವಾಗಿ ಸಹಾಯಧನಗಳನ್ನು ನೀಡುವುದರ ಮೂಲಕ ನೊಂದವರ ಬದುಕಿನಲ್ಲಿ ಒಂದು ಆಶಾಕಿರಣವಾಗಿ ಹೊರಹೊಮ್ಮುತ್ತಿದೆ. ಈಗಾಗಲೇ ಐದು ಕೋಟಿಗಿಂತಲೂ ಅಧಿಕ ಮೊತ್ತದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ನೀಡಿರುವುದು ಕ್ರಿಯೇಟಿವ್ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಮಾನಗಳಲ್ಲೂ ಕೂಡ ಇಂತಹ ನೂರಾರು ಕಾರ್ಯ ಚಟುವಟಿಕೆಗಳಲ್ಲಿ , ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವಲ್ಲಿ ಕ್ರಿಯೇಟಿವ್ ಸಂಸ್ಥೆಯು ಸದಾ ಸಮಾಜದೊಂದಿಗೆ ಕೈಜೋಡಿಸುತ್ತದೆ ಎಂದು ನುಡಿದರು.

ಮುಖ್ಯ ಅತಿಥಿಗಳಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಯವರು ಮಾತನಾಡಿ ಕಠಿಣ ಪರಿಸ್ಥಿತಿಯಲ್ಲೂ ಕೂಡ ವಿಚಲಿತರಾಗದೆ ಹೇಗೆ ಮುನ್ನಡೆಯಬೇಕೆಂಬುದಕ್ಕೆ ಈ ವಿದ್ಯಾ ಸಂಸ್ಥೆಯ ಸಂಸ್ಥಾಪಕರುಗಳೇ ಸಾಕ್ಷಿ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕ್ರಿಯೇಟಿವ್ ಸಂಸ್ಥೆಯು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಶೈಕ್ಷಣಿಕ ರಂಗದಲ್ಲಿ ಮಾತ್ರವಲ್ಲದೆ ಇಂದು ಸಹಕಾರ ರಂಗಕ್ಕೂ ಕೂಡ ಸಂಸ್ಥೆಯು ತನ್ನ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿದೆ.ಇದರಿಂದ ಈ ಭಾಗದಲ್ಲಿನ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂತಹ ಬ್ಯಾಂಕಿನ ಅವಶ್ಯಕತೆ ತುಂಬಾ ಇತ್ತು.ಅದನ್ನು ಕ್ರಿಯೇಟಿವ್ ಸಂಸ್ಥಾಪಕರು ಈಡೇರಿಸುವ ಮೂಲಕ ಜನರಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ ಎಂದು ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ ಕೆ.ಆರ್. ರವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಸಹಕಾರ ರಂಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಹೇಗೆ ತಮ್ಮ ಸೇವೆಯನ್ನು ನೀಡುತ್ತವೆಯೋ ಅದಕ್ಕಿಂತಲೂ ಹೆಚ್ಚಿನ ಸೇವೆಯನ್ನು ಜನಸಾಮಾನ್ಯರಿಗೆ ನೀಡಿದೆ. ಇಂದು ಉದ್ಘಾಟನೆಗೊಂಡಿರುವ ಈ ಸಹಕಾರ ಸಂಘವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಇದರಿಂದ ಅನುಕೂಲವಾಗಲಿ. ಉತ್ತಮವಾದ ಸೇವೆಯನ್ನು ಒದಗಿಸಿ ಆರ್ಥಿಕ ಕ್ಷೇತ್ರದಲ್ಲೂ ಯಶಸ್ಸನ್ನು ಗಳಿಸಲಿ ಎಂದು ಇಲಾಖೆಯ ವತಿಯಿಂದ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ರಾಜ್ಯ ಕ್ರಷರ್ ಅಸೋಸಿಯೇಷನ್ ರಾಜ್ಯಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿಯವರು ಮಾತುಗಳನ್ನಾಡುತ್ತ, ಕ್ರಿಯೇಟಿವ್ ಸಂಸ್ಥೆ ಕೇವಲ ಒಂದು ವಿದ್ಯಾ ಸಂಸ್ಥೆಯಾಗಿ ಬೆಳೆಯದೆ ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಸಂಸ್ಥೆಯಾಗಿದೆ.ತುಳು ನಾಡಿನ ಸಂಸ್ಕೃತಿಯನ್ನು ತಿಳಿಹೇಳುವಲ್ಲಿಯೂ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇಂದು ಉದ್ಘಾಟನೆಗೊಂಡಿರುವ ಸೊಸೈಟಿಯು ಉತ್ತಮ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಲಿ ಎಂದು ಶುಭ ಹಾರೈಸಿದರು.

ಹಿರ್ಗಾನ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ರವರು, ಕ್ರಿಯೇಟಿವ್ ಸಂಸ್ಥೆಯ ಕಾರ್ಯ ಆರಂಭದ ಮೊದಲ ದಿನಗಳಿಂದಲೂ ಸದಾ ನಾನು ಜೊತೆಗಿದ್ದು ಸಂಸ್ಥೆಯ ಅನೇಕ ಶೈಕ್ಷಣಿಕ ಸಾಮಾಜಿಕ ಚಟುವಟಿಕೆಗಳನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ.ಇಂದು ಉದ್ಘಾಟನೆಗೊಂಡಿರುವ ಈ ಸೊಸೈಟಿಯು ಹೆಮ್ಮರವಾಗಿ ಬೆಳೆದು ಕಾರ್ಕಳ ತಾಲೂಕಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹ ಸಂಸ್ಥಾಪಕರಲ್ಲಿ ಓರ್ವರಾದ ಆದರ್ಶ ಎಂ.ಕೆ. ರವರು, ಜನಸಾಮಾನ್ಯರು ಇಂದು ಆರ್ಥಿಕವಾಗಿ ಸಬಲರಾಗಿ ನೆಮ್ಮದಿಯಾಗಿ ಜೀವನ ನಡೆಸುವಲ್ಲಿ ಸಹಕಾರಿಯಾಗಿದ್ದು ಸಹಕಾರ ಸಂಘಗಳು. ಈ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ನಾವು ಕ್ರಿಯೇಟಿವ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಪ್ರಾರಂಭಿಸಿದ್ದೇವೆ.ಇದನ್ನು ಪಾಲಿಸಿ ಪೋಷಿಸಿ ಬೆಳೆಸುವಲ್ಲಿ ತಾವೆಲ್ಲರೂ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಬಿ.ಎಂ. ಶಾಲೆಗೆ ಹಾಗೂ ಅಗತ್ಯವಿರುವವರಿಗೆ ಧನಸಹಾಯ ವಿತರಿಸಲಾಯಿತು. ಷೇರುದಾರರಿಗೆ ಪ್ರಮಾಣಪತ್ರಗಳು ಮತ್ತು ಸಾಲ ಸೌಲಭ್ಯಗಳನ್ನು ನೀಡಲಾಯಿತು. ನವೀನ್ ಪಿಂಟೋ, ಸುನೀಲ್ ಕುಮಾರ್ ಜಿ., ಯೋಗೀಶ್ ಇವರುಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್., ವಿದ್ವಾನ್ ಗಣಪತಿ ಭಟ್, ಅಮೃತ್ ರೈ ಯು. ವಿಮಲ್ ರಾಜ್, ಕ್ರಿಯೇಟಿವ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ರವಿ ಹೆಗಡೆ, ಕ್ರಿಯೇಟಿವ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಹರೀಶ್ ಡಿ, ಆಶಾ ಕೆ ಎಸ್, ರಶ್ಮಿ, ಸುನೀಲ್ ಕುಮಾರ್ ಮತ್ತು ಸಲಹಾ ಸಮಿತಿಯ ಸದಸ್ಯರುಗಳಾದ ಸುನೀಲ್ ಶೆಟ್ಟಿ, ಅಕ್ಷತಾ ಶೆಣೈ ಉಪಸ್ಥಿತರಿದ್ದರು. ಲೋಹಿತ್ ಎಸ್ ಕೆ ಕಾರ್ಯಕ್ರಮವನ್ನು ನಿರೂಪಿಸಿ, ರವಿ ಹೆಗಡೆಯವರು ವಂದಿಸಿದರು.

 

 

Related posts

ರೋಟರಿ ಕ್ಲಬ್ ಕಾರ್ಕಳ ಜಂಟಿ ಸಭೆ

Madhyama Bimba

ನಮ್ಮ ಕ್ಲಿನಿಕ್‌ನಲ್ಲಿ ಶುಶ್ರೂಷಕ ಹುದ್ದೆ: ಅರ್ಜಿ ಆಹ್ವಾನ

Madhyama Bimba

ಎಳ್ಳಾರೆ: ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಶಂಕು ಸ್ಥಾಪನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More