ಮೂಡುಬಿದಿರೆ ತಾಲೂಕು 9 ಮಾಗಣೆಯ ಒಡೆಯ ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಏಪ್ರಿಲ್ 26 ರಿಂದ ಮೇ 1 ರವರೆಗೆ ನಡೆಯಲಿರುವುದಾಗಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ ಶ್ರೀಪತಿ ಭಟ್ ಮಾಹಿತಿ ನೀಡಿದರು. ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಕಳೆದ ಮೂರು ವರ್ಷಗಳಿಂದ ಅವಿರತವಾಗಿ ಶ್ರಮವಹಿಸಿ ಭಕ್ತಾದಿಗಳ ಇಷ್ಟಾರ್ಥದಂತೆ ಶಿಲಾಮಯ ದೇವಸ್ಥಾನವನ್ನು ಮರು ನಿರ್ಮಿಸಿ ಪುನರ್ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಭಿನ್ನಾಣಿ ಸೀಮೆಗೆ ಒಳಪಟ್ಟ ಮಾರೂರು ಕಲ್ಲಬೆಟ್ಟು ಕರಿಂಜೆ ಲಾಡಿ ಮಾರ್ನಾಡು ಕರ್ಪೆ ಮಾರ್ಪಾಡಿ ತೋಡಾರು ಪುಚ್ಚೆಮೊಗರು ಹೊಸಬೆಟ್ಟು ಮಾಗಣೆಗಳ ಗ್ರಾಮಸ್ಥರು ಆರಾಧಿಸಿಕೊಂಡು ಬಂದಿರುವ ಪ್ರಧಾನ ದೇವರಾಗಿರುವ ಗೋಪಾಲಕೃಷ್ಣ ಹಾಗೂ ದೈವ ಕೊಡಮಣಿತ್ತಾಯ ಕ್ಷೇತ್ರವು ಭಕ್ತಾದಿಗಳ ಸಹಕಾರದೊಂದಿಗೆ ಆಕರ್ಷಣೀಯವಾಗಿ ನಿರ್ಮಾಣಗೊಂಡಿರುವುದಾಗಿ ಸಮಿತಿಯವರು ತಿಳಿಸಿದ್ದಾರೆ. ಸುಮಾರು 800 ವರ್ಷಗಳ ಹಿಂದೆ ಆರಾಧಿಸಿಕೊಂಡು ಬಂದಿರುವ ಶ್ರೀ ಕ್ಷೇತ್ರದ ದೈವ ದೇವರುಗಳು ಇಂದಿಗೂ ಭಕ್ತಾದಿಗಳ ಇಷ್ಟಾರ್ಥಗಳನ್ನು ಒದಗಿಸಿ ಪ್ರೀತಿಗೆ ಪಾತ್ರವಾಗಿದೆ. ಪಶ್ಚಿಮಾಭಿಮುಖವಾಗಿ ಪ್ರವೇಶ ದ್ವಾರ ಹೊಂದಿರುವ ಶ್ರೀ ಕ್ಷೇತ್ರ ಸುಂದರ ಕೆತ್ತನೆಯ ಮುಖಮಂಟಪ ವಿಶಾಲವಾದ ಗೋಪುರ ಹೊಂದಿದೆ. ಶ್ರೀ ಕ್ಷೇತ್ರದಲ್ಲಿ ಸುಂದರವಾದ ತೀರ್ಥ ಮಂಟಪ, ಹನುಮಂತ ಮತ್ತು ಗಣಪತಿಯ ಪ್ರತ್ಯೇಕ ಗುಡಿಗಳು, ಕೊಡಮಣಿತ್ತಾಯ ಸ್ಥಾನ, ತಂತ್ರಿಗಳ ಕೊಠಡಿ, ತೀರ್ಥಭಾವಿ, ನೈವೇದ್ಯ ಕೋಣೆ, ಕುಂಭಕಂಠಿಣಿ ಜಾತ್ರೋತ್ಸವ ಕಟ್ಟೆ, ದೇವಸ್ಥಾನಕ್ಕೆ ಕಾರ್ಯಾಲಯ, ಧ್ವಜಸ್ತಂಭ ಸಹಿತ ದ್ವಜ ಕಟ್ಟೆ ಕೊಡಮಣಿ ತ್ತಾಯ ಮಂಚ, ತೀರ್ಥಭಾವಿ, ಬಲಿಪೀಠ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಸುಂದರವಾಗಿ ನಡೆಸಲಾಗಿದೆ,
ಮೇ ಒಂದರಂದು ಬೆಳಿಗ್ಗೆ ಗಂಟೆ 5 ರಿಂದ ಪ್ರಾರಂಭಗೊಂಡು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಮಹಾಅನ್ನ ಸಂತರ್ಪಣೆ ಜರಗಲಿದೆ. ಎಪ್ರಿಲ್ 26 ನೇ ತಾರೀಕಿನಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಾ ಕಾರ್ಯಕ್ರಮ ನಡೆಯಲಿದೆ. ಮೇ 2 ರಿಂದ 6ರವರೆಗೆ ವರ್ಷಾವಧಿ ಜಾತ್ರೆ ಜರಗಲಿದೆ. ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಮೇ 26 ನೇ ತಾರೀಕಿನಂದು ಹೊರೆ ಕಾಣಿಕೆ ಮೂಡಬಿದಿರೆ ಸ್ವರಾಜ್ಯ ಮೈದಾನದ ಪುರಾತನ ಮಾರಿಗುಡಿಯ ಮುಂಭಾಗದಿಂದ ವೈಭವಯುತವಾಗಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಜೀವಂಧರ ಕುಮಾರ್, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಶಂಭು ಎನ್. ಶೆಟ್ಟಿ, ಆಡಳಿತ ಮೊತ್ತೇಸರ ಹೊಸಂಗಡಿ ಅರಮನೆ ಸಂಪತ್ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಖಂಡಿಗ ರಾಮದಾಸ ಆಸ್ರಣ್ಣ, ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ, ಶ್ರೀಪತಿ ಉಪಾಧ್ಯಾಯ ಬಡೆಕೋಡಿ, ಸುಧಾಕರ ಶೆಟ್ಟಿ ಮಿತ್ತೊಟ್ಟುಗುತ್ತು, ಕೋಶಾಧಿಕಾರಿ ಶಂಕರ ಎ. ಕೋಟ್ಯಾನ್, ಸ್ವಾಗತ ಸಮಿತಿ ಅಧ್ಯಕ್ಷ ರಮೇಶ್ ಎಸ್. ಶೆಟ್ಟಿ ಸುನಿಲ್ ಶೆಟ್ಟಿ, ಆರ್ಥಿಕ ಸಮಿತಿಯ ಅಶೋಕ್ ಬಿ, ಗೋಷ್ಠಿಯಲ್ಲಿದ್ದರು.
