ಕಾರ್ಕಳ: ಇಲ್ಲಿನ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಸಂಸ್ಥೆಯ ಫಾ.ಎಫ್.ಪಿ.ಎಸ್. ಮೋನಿಸ್ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿಟ್ಟೆಯ ಎನ್‌ಎಂಎಎಮ್ ಸಂಸ್ಥೆಯ ಪ್ರಾಧ್ಯಾಪಕ ಡಾ. ವಾಸುದೇವರವರು ಆಗಮಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ವಿಜ್ಞಾನ ಎನ್ನುವುದು ಪ್ರಯೋಗಗಳ ಮೂಲಕ ಕಲಿಯುವಂತಹ ಕುತೂಹಲಕಾರಿಯಾದ ವಿಷಯ. ವಿಜ್ಞಾನಕ್ಕೆ ವಸ್ತುನಿಷ್ಟತೆ ಹಾಗೂ ಪುನಾರಾವರ್ತನೆ ಬಹಳ ಅಗತ್ಯ. ಪ್ರಶ್ನೆಗಳನ್ನು ಕೇಳುವುದರ ಮೂಲಕ ಮಕ್ಕಳು ವಿಜ್ಞಾನದ ಬಗ್ಗೆ ಆಸಕ್ತಿಯನ್ನು ತಳೆಯಬೇಕು” ಎಂದು ಹೇಳಿದರು.
ಇನ್ನೋರ್ವ ಅತಿಥಿ ಅಳ್ವಾಸ್ ವಿದ್ಯಾಸಂಸ್ಥೆಯ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕರಾದ ಯೋಗೀಂದ್ರ ಅವರು ವಿಜ್ಞಾನ ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ರೈಸ್ಟ್‌ಕಿಂಗ್ ಎಜುಕೇಶನ್ ಟ್ರಸ್ಟ್‌ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಪ್ರಕೃತಿಯಿಂದ ನಾವು ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು, ಪ್ರಕೃತಿ ಜಗತ್ತಿನ ಶ್ರೇಷ್ಟ ವಿಜ್ಞಾನಿ. ಮಕ್ಕಳು ಗಣಿತ ವಿಜ್ಞಾನದಂತಹ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ತಳೆಯಬೇಕು. ಪ್ರಕೃತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವಿಜ್ಞಾನ ಕಲಿಕೆ ಸಾಧ್ಯ” ಎಂದು ಹೇಳಿದರು.
ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯರಾದ ಲಕ್ಷ್ಮೀನಾರಾಯಣ ಕಾಮತ್, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ರುಡಾಲ್ಫ್ ಕಿಶೋರ್ ಲೋಬೊ ಹಾಗೂ ಸಂಸ್ಥೆಯ ಸಮಾಲೋಚಕಿಯಾದ ಸಿಸ್ಟರ್ ಡಾ.ಶಾರ್ಲೆಟ್ ಸಿಕ್ವೇರಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ನಾಗಲಕ್ಷ್ಮೀ ವಿಜ್ಞಾನ ದಿನದ ಪ್ರತಿಜ್ಞೆಯನ್ನು ಬೋಧಿಸಿದರೆ ಶಿಕ್ಷಕಿ ಶ್ರೀಮತಿ ದೀಪ್ತಿ ಹಾಗೂ ವಿದ್ಯಾರ್ಥಿ ಆಶ್ನನ್ ಡಿಸೋಜಾ ವಿಜ್ಞಾನ ದಿನದ ಮಹತ್ವಗಳ ಕುರಿತು ಮಾತನಾಡಿದರು. ಏಳನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ದಿಯಾ ಶೆಟ್ಟಿ ಸ್ವಾಗತಿಸಿ ಮಾ| ಶ್ರುತಿಕ್ ವಂದಿಸಿದರು. ಕುಮಾರಿ ಆಯಿಷಾ ನಿಧಾ ಕಾರ್ಯಕ್ರಮ ನಿರೂಪಿಸಿದರು.