ಮೂಡುಬಿದಿರೆ

ಬೈಲಾರೆ ರಾಜಾಕಾಲುವೆಗೆ ಅಪಾಯ?

ಮೂಡುಬಿದಿರೆ ಜೈನ ಕಾಶಿಗೆ ಅಂಟಿಕೊಂಡಿರುವ ಬೈಲಾರೆ ಪ್ರದೇಶವು ಮುಂದಿನ ಮಳೆಗಾಲ ಸಂದರ್ಭದಲ್ಲಿ ಗಮನ ಸೆಳೆಯುವ ಪ್ರದೇಶವಾಗಿ ಮೂಡಿಬರಲಿದೆ. ಕಳೆದ ಕೆಲವಾರು ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ಉಕ್ಕೇರುವ ಮಳೆ ನೀರಿನಿಂದಾಗಿ ಮನೆಗಳೋಳಗೆ ನೀರು ನುಗ್ಗುವ ಪ್ರಸಂಗ ನಡೆಯುತ್ತಲೇ ಬಂದಿದೆ. ಈ ಬಗ್ಗೆ ಈ ಪ್ರದೇಶದ ಜನತೆ ಮಳೆಗಾಲದ ಸಂದರ್ಭ ತಮ್ಮ ನೋವನ್ನು ತೋಡಿಕೊಳ್ಳುತ್ತಲೇ ಬಂದಿದ್ದಾರೆ. ಈ ಅವಾಂತರಕ್ಕೆ ಮುಖ್ಯ ಕಾರಣವಾಗುತ್ತಿರುವುದು ರಾಜಾ ಕಾಲುವೆಯ ಕಡೆಗಣನೆ.

 

ಬೈಲಾರೆ ಪ್ರದೇಶದಲ್ಲಿ ಭೂ ಖರೀದಿಸಿ  ಸೈಟುಗಳಾಗಿ ಭೂಮಿಯನ್ನು ರೂಪಿಸಿ ಮಾರಾಟ ಮಾಡಿದವರು ರಾಜ ಕಾಲುವೆಯನ್ನು ಸಾಕಷ್ಟು ಕಿರಿದುಗೊಳಿಸಿ ನೀರು ಸಾಗಲು ಅವಕಾಶ ಮಾಡಿಕೊಡದೆ ಇರುವುದೇ ಪ್ರಮುಖ ಕಾರಣ. ಕಾನೂನಿನಲ್ಲಿ ರಾಜ ಕಾಲುವೆಗಳ ರಕ್ಷಣೆಗೆ ಸಾಕಷ್ಟು ನಿಯಮಗಳಿದ್ದರೂ ಅವೆಲ್ಲವನ್ನು ಗಾಳಿಗೆ ತೂರಿ ಭೂಮಿಯನ್ನು ಸಮತಟ್ಟುಗೊಳಿಸಿ, ಕಾಲುವೆಯ ಅಂಚಿನವರೆಗೆ ಸೈಟುಗಳನ್ನು ನಿರ್ಮಿಸಿರುವುದೇ ಈ ಅಪಾಯಗಳು ಎದುರಾಗಲು ಕಾರಣ.

ಕಾಲುವೆಯ ಪಕ್ಕದಲ್ಲಿಯೇ ಮಣ್ಣುಗಳನ್ನು ಹಾಕಿ ಮಳೆಗಾಲದ ಸಂದರ್ಭದಲ್ಲಿ ಕಾಲುವೆ ತನ್ನಂತಾನಾಗೆ ಮುಚ್ಚುವಂತೆ ಮಾಡುವ ಮನುಷ್ಯ ಮನಸ್ಸಿಗೆ ಪ್ರಕೃತಿ ಮತ್ತೊಂದು ರೀತಿಯಲ್ಲಿ ಮುನಿಯುತಿದೆ. ಹಾಗಾಗಿ ಈ ಭಾಗದಲ್ಲಿ ಮಳೆ ನೀರು ಸಾಗಲು ಸಾಕಷ್ಟು ಜಾಗವಿಲ್ಲದೆ ಹೆಚ್ಚುವರಿ ನೀರು, ಪಕ್ಕದಲ್ಲಿ ಮನೆ ನಿರ್ಮಿಸಿಕೊಂಡವರ ಮನೆಗಳ ಒಳಗೆ ನುಗ್ಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ಆದ್ದರಿಂದ ರಾಜ ಕಾಲುವೆಗಳನ್ನು ನಿಧಾನವಾಗಿ ನುಂಗಿ, ಆ ಜಾಗವನ್ನು ಮನೆ ಕಟ್ಟಲು ಸಮತಟ್ಟುಗೊಳಿಸಿ ಮಾರಾಟ ಮಾಡಿ ದುಡ್ಡು ಮಾಡುವವರು ಈ ಬಗ್ಗೆ ಗಮನ ಹರಿಸಲೇ ಬೇಕಾಗಿದೆ. ಮೂಡುಬಿದಿರೆಯ ಪ್ರಮುಖ ತಾಣ ಬಡಗುಬಸದಿಯಿಂದ ನಾಗರಕಟ್ಟೆ ಸಂಧಿಸುವ ರಾಜ ಕಾಲುವೆ, ಕಳೆದ ಕೆಲವು ವರ್ಷಗಳಿಂದ ಪುರಸಭೆಯ ಸದಸ್ಯರ ಆಸಕ್ತಿಯಂತೆ ಹೂಳು ತೆಗೆದು ಶುದ್ಧೀಕರಣ ಮಾಡಿ ಪರಿಸರದಲ್ಲಿ ಉತ್ತಮ ಕಾಲುವೆಯಾಗಿ ಗಮನ ಸೆಳೆದಿತ್ತು. ಇದೀಗ ಬೈಲಾರೆಯ ಈ ಪ್ರದೇಶದಲ್ಲಿ ದುಡ್ಡು ಮಾಡುವ ಹವಣಿಕೆಯೊಂದಿಗೆ ಬಂದಿರುವ ಯಾರೋ ವ್ಯಕ್ತಿಗಳು ಪಕ್ಕದ ಜಾಗವನ್ನು ಸಮತಟ್ಟುಗೊಳಿಸಿ ಹೆಚ್ಚುವರಿ ಮಣ್ಣನ್ನು ತೋಡಿಗೆ ಜಾರಿಸಿ ಬಿಟ್ಟಿದ್ದಾರೆ. ಮಾತ್ರವಲ್ಲದೆ ತೋಡಿನ ನಡುಭಾಗದಲ್ಲೇ ಸರ್ವೇ ಕಲ್ಲನ್ನು ಕೂಡ ನಾಟಿಸಲಾಗಿದೆ. ಈ ಸರ್ವೇ ಕಲ್ಲನ್ನು ನೋಡುವಾಗ ರಾಜ ಕಾಲುವೆಯನ್ನು ಕೂಡ ಅವರು ವಶಕ್ಕೆ ಪಡೆದ ಗುಮಾನಿ ಉಂಟಾಗುತ್ತಿದೆ.

ಈ ಪ್ರದೇಶದಲ್ಲಿ ಸುಮಾರು ನೂರರಷ್ಟು ಮನೆಗಳು ಈಗಾಗಲೇ ವಾಸ್ತವ್ಯವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ 25ಕ್ಕೂ ಅಧಿಕ ಮನೆಗಳಾಗುವ ಜಾಗವನ್ನು ನಿರ್ಮಿಸಲಾಗಿದೆ. ಆದ್ದರಿಂದ ಈ ಭಾಗದಲ್ಲಿ ಬೀಳುವ ಮಳೆ ನೀರು ರಾಜ ಕಾಲುವೆಯಲ್ಲೇ ಸಾಗಬೇಕಾಗಿದೆ. ಒಂದು ವೇಳೆ ರಾಜ ಕಾಲುವೆ ಕಿರಿದಾದರೆ ಮುಂದಿನ ದಿನಗಳಲ್ಲಿ ಅಪಾಯ ಇನ್ನಷ್ಟು ಹೆಚ್ಚಲಿದೆ. ಈ ಪ್ರದೇಶದವರೇ ಆಗಿರುವ ಡಾಕ್ಟರ್ ಎಂ ವೀರಪ್ಪ ಮೊಯ್ಲಿ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬೈಲಾರೆ ಪ್ರದೇಶದ ಕಿರಿದಾದ ತೋಡನ್ನು ಅಗಲಗೊಳಿಸಿ ರಾಜ ಕಾಲುವೆ ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ಕಾಲುವೆಯ ಆಸು ಪಾಸಿನ ಜನರು ತಮ್ಮ ಜಾಗಗಳನ್ನು ಸ್ವಯಂ ಪ್ರೇರಿತವಾಗಿ ರಾಜಕಾಲುವೆ ನಿರ್ಮಿಸಲು ಬಿಟ್ಟುಕೊಟ್ಟಿದ್ದರು. ಆ ದಿನಗಳಲ್ಲಿ ಬಡಗು ಬಸದಿಯ ಪೂರ್ವ ಪಶ್ಚಿಮ ದಿಕ್ಕಿನ ಜಾಗಗಳಲ್ಲಿ ಮಳೆ ನೀರು ತುಂಬಿ ರಸ್ತೆ ಗಳಲ್ಲಿ ವಾಹನ ಸಂಚಾರಕ್ಕೆ ಮತ್ತು ಜನ ಸಂಚಾರಕ್ಕೆ ಅಡ್ಡಿ ಉಂಟಾಗಿರುವ ಘಟನೆಗಳು ನಡೆದಿತ್ತು ಎನ್ನುತ್ತಾರೆ ಗ್ರಾಮಸ್ಥ ಸಂದೀಪ್ ರವರು.

ಶಾಲೆಗಳಿಗೆ ಮಳೆಯ ನೀರಿನ ಆತಂಕದಿಂದಾಗಿ ರಜೆ ನೀಡಿರುವ ಘಟನೆಯು ನಡೆದಿತ್ತು ಎಂದು ಅವರು ನೆನಪಿಸುತ್ತಾರೆ. ಆದರೆ ಇಂದು ದುಡ್ಡಿನ ದಂಧೆಯ ವಸತಿ ನಿರ್ಮಾಣದ ಜಾಗ ಅಭಿವೃದ್ಧಿಕಾರರು ಅದೇ ರಾಜ ಕಾಲುವೆಯನ್ನು ಮತ್ತೆ ಕಿರಿದುಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಗುಮಾನಿ ಇದೆ. ಈ ಬಗ್ಗೆ ಆಡಳಿತಾತ್ಮಕ ಅಧಿಕಾರಿಗಳು ಕೂಡ ಕಣ್ಣು ಹಾಯಿಸಬೇಕಾಗಿದೆ. ಇಲ್ಲದಿದ್ದಲ್ಲಿ ಮುಂದಿನ ಮಳೆಗಾಲ ಸಂದರ್ಭದಲ್ಲಿ ಮತ್ತೆ ಸ್ಥಳೀಯ ಮನೆಗಳಿಗೆ ನೀರು ನುಗ್ಗುವ ಪ್ರಸಂಗ ನಡೆದು ಅಪಾಯ ಕಣ್ಣೆದುರು ಕಾಣುವ ಲಕ್ಷಣ ಕಂಡುಬರಲಿದೆ.

Related posts

ಮೂಡುಬಿದಿರೆ ಗುಂಡ್ಯಡ್ಕದ ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನದಲ್ಲಿ ಭಜನಾ ಮಂಡಳಿಯ ವಜ್ರ ಮಹೋತ್ಸವ ಪ್ರಯುಕ್ತ”ಅಖಂಡ ಭಜನಾ ಸಪ್ತಾಹ ” ಆರಂಭ

Madhyama Bimba

ಜೇಸಿ ರಾಷ್ಟ್ರೀಯ ತರಬೇತುದಾರರಾಗಿ ವಿಕ್ರಮ ನಾಯಕ್

Madhyama Bimba

ಸಚ್ಚೇರಿಪೇಟೆ ಲಯನ್ಸ್ ಶಾಲೆಯಲ್ಲಿ ಗಾಂಧಿ, ಶಾಸ್ತ್ರೀ ಜನ್ಮ ಜಯಂತಿ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More